ರಾಜ್ಯ ವಿಧಾನಸಭೆ ಗದ್ದುಗೆ ಗುದ್ದಾಟ: ಅಧಿಕಾರದ ಚುಕ್ಕಾಣಿ ಹಿಡಿಯಲು ದೊಡ್ಡ ಪಕ್ಷಗಳ ಆರ್ಭಟ; ಖಾತೆ ತೆರೆಯಲು ಸಣ್ಣ ಪಕ್ಷಗಳ ಪರದಾಟ!

ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿರುವಾಗ, ಇತರ ರಾಜಕೀಯ ಪಕ್ಷಗಳು ತಮ್ಮ ಖಾತೆಯನ್ನು ತೆರೆಯಲು ಬಯಸುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿರುವಾಗ, ಇತರ ರಾಜಕೀಯ ಪಕ್ಷಗಳು ತಮ್ಮ ಖಾತೆಯನ್ನು ತೆರೆಯಲು ಬಯಸುತ್ತಿವೆ.

ದೆಹಲಿ ಮತ್ತು ಪಂಜಾಬ್ ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ) ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕಾಲಿಡಲು ಬಯಸಿದೆ. 2018 ರಲ್ಲಿ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಮತದಾರರು ಪಕ್ಷದ ಪರವಾಗಿರಲಿಲ್ಲ ಮತ್ತು ಪರಿಣಾಮವಾಗಿ, ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ಕರಾವಳಿ ಕರ್ನಾಟಕದಲ್ಲಿ ಪ್ರಬಲ ಅಸ್ತಿತ್ವ ಹೊಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕೇವಲ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಅದು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಶೇಕಡಾ 10.5 ರಷ್ಟು ಮತಗಳನ್ನು ಪಡೆದುಕೊಂಡಿದೆ.

ಈ ಚುನಾವಣಾ ಸಮಯದಲ್ಲಿ ಕೆಲವು ಹೊಸ ಪಕ್ಷಗಳು ಪ್ರಭಾವ ಬೀರಲು ಅಣಿಯಾಗಿವೆ. ಈ ಹಿಂದೆ ಬಿಜೆಪಿಯಲ್ಲಿ ತಮಗೆ ಸಿಗುತ್ತಿದ್ದ ಪ್ರಾಮುಖ್ಯತೆ ಸಿಗದೇ ಅಸಮಾಧಾನಗೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ  ಕಲ್ಯಾಣ ಕರ್ನಾಟಕದಲ್ಲಿ ಕೇಸರಿ ಪಕ್ಷದ ಭವಿಷ್ಯಕ್ಕೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಆರಂಭಿಸಿದ್ದಾರೆ.

ಅಲ್ಲದೆ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಮತ್ತು ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಸೇರಿದಂತೆ ಅನೇಕ ಹೊಸ ಪಕ್ಷಗಳು ಸದ್ದು ಮಾಡುತ್ತಿವೆ. ಕೆಆರ್‌ಎಸ್ ಪಕ್ಷ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧದ ಹೋರಾಟದ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿದ್ದರೆ, ಯುಪಿಪಿ ತನ್ನದೇ ವಿಧಾನದ ಮೂಲಕ ಜನರ ಗಮನ ಸೆಳೆದಿದೆ.

ಆದಾಗ್ಯೂ, ಕರ್ನಾಟಕದ ಮತದಾರರು ಯಾವಾಗಲೂ ಸಣ್ಣ ಮತ್ತು ಹೊಸ ರಾಜಕೀಯ ಪಕ್ಷಗಳಿಗಿಂತ ರಾಷ್ಟ್ರೀಯ ಅಥವಾ ದೊಡ್ಡ ಪ್ರಾದೇಶಿಕ ಪಕ್ಷಗಳನ್ನು ಆಯ್ಕೆ ಮಾಡುತ್ತಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ.

ಪಕ್ಷಗಳ ಸಿದ್ಧಾಂತಗಳು ಅವುಗಳ ಅಸ್ತಿತ್ವದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಿದ್ಧಾಂತದೊಂದಿಗೆ ಅನೇಕರು ಬರುತ್ತಾರೆ. ಆದರೆ ಈ ಅವಧಿಯಲ್ಲಿ ಮತದಾರರಿಗೆ ಅವು ಪ್ರಮುಖ ಸಮಸ್ಯೆಗಳಲ್ಲ.  ಇರುವ ಸೈದ್ಧಾಂತಿಕ ಅಂತರವನ್ನು ತುಂಬದ ಹೊರತು, ಅವರ ಉಳಿವು ಅಸಾಧ್ಯ ಎಂಬುದು ರಾಜಕೀಯ ತಜ್ಞರ ಅಭಿಮತ.

ಈ ಚುನಾವಣೆಯಲ್ಲಿ ತಮ್ಮ ಪಕ್ಷವು ವಿಚ್ಛಿದ್ರಕಾರಕ ರಾಜಕೀಯ ಶಕ್ತಿಯಾಗಲಿದೆ ಎಂದು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ  ಹಾಗೂ ಸಮಾಜದಲ್ಲಿ ಕಣ್ಣಿಗೆ ಗೋಚರಿಸುವ  ಮತ್ತು ಸಕ್ರಿಯ ರಾಜಕೀಯ ಪಕ್ಷವಾಗಿದ್ದೇವೆ. ಕಳೆದ ಮೂರೂವರೆ ವರ್ಷಗಳಲ್ಲಿ, ನಾವು ಬಹಳ ದೂರ ಸಾಗಿದ್ದೇವೆ ಮತ್ತು ಸುಮಾರು 40,000 ಸದಸ್ಯರನ್ನು ಹೊಂದಿದ್ದೇವೆ. ನಮ್ಮದು ಸಂಪೂರ್ಣವಾಗಿ ಕ್ರೌಡ್ ಫಂಡಿಂಗ್ ಪಕ್ಷವಾಗಿದ್ದು, ನಮ್ಮಷ್ಟು ಪಾರದರ್ಶಕ ಪಕ್ಷ ಬೇರೊಂದಿಲ್ಲ ಎಂದು ಅವರು ಹೇಳಿದರು.

ನಮ್ಮ ಪಕ್ಷದ  ಪರ ಜನರಿಂದ ಅಗಾಧ ಪ್ರತಿಕ್ರಿಯೆ ಇದೆ, ಅವರು ನಾವು ಆಯೋಜಿಸಿದ ಅಭಿಯಾನಗಳಿಂದ ಪ್ರಭಾವಿತರಾಗಿದ್ದಾರೆ. ಕೆಆರ್‌ಎಸ್ ಸದಸ್ಯರು ಎಲ್ಲ 224 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ನಾವು ಪ್ರಭಾವ ಬೀರುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ರವಿಕೃಷ್ಣ ಹೇಳಿದರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪಕ್ಷವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com