ಸ್ವಕ್ಷೇತ್ರದಲ್ಲೇ ಆರ್ ಅಶೋಕ್ ಸೋಲಿಸಲು 'ಅನಕ' ತಂತ್ರ ರೂಪಿಸಿದ ಡಿಕೆ ಬ್ರದರ್ಸ್!

ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಅವರು ಕಣಕ್ಕಿಳಿದಿದ್ದು, ಸ್ವಕ್ಷೇತ್ರದಲ್ಲಿಯೇ ಅಶೋಕ್ ಅವರನ್ನು ಸೋಲಿಸಲು ಡಿಕೆ.ಬ್ರದರ್ಸ್ ತಂತ್ರ ರೂಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಅವರು ಕಣಕ್ಕಿಳಿದಿದ್ದು, ಸ್ವಕ್ಷೇತ್ರದಲ್ಲಿಯೇ ಅಶೋಕ್ ಅವರನ್ನು ಸೋಲಿಸಲು ಡಿಕೆ.ಬ್ರದರ್ಸ್ ತಂತ್ರ ರೂಪಿಸಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಟ್ವಿಸ್ಟ್ ನೀಡಿದ್ದ ಕಾಂಗ್ರೆಸ್, ಕೊನೆಗೆ ರಘುನಾಥ ನಾಯ್ಡು ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಮತದಾರರ ಪಟ್ಟಿ ಹಿಡಿದುಕೊಂಡು ಅಶೋಕ್ ಮಣಿಸಲು ಡಿಕೆ ಬ್ರದರ್ಸ್ ಅವರು ಭಾರೀ ತಂತ್ರವೊಂದನ್ನು ರೂಪಿಸಿದ್ದು, ಈ ತಂತ್ರಕ್ಕೆ 'ಅನಕ'.ಎಂದು ಕರೆಯಲಾಗುತ್ತಿದೆ.

ಅ ಎಂದರೆ, ಅಲ್ಪಸಂಖ್ಯಾತು, ನ ಎಂದರೆ, ನಾಯ್ಡುಗಳು (ತೆಲುಗು ಮಾತನಾಡುವ ಜನರು), ಕ ಎಂದರೆ ಕನಕಪುರ ನಿವಾಸಿಗಳು ಎಂದರ್ಥ.

ಪದ್ಮನಾಭ ನಗರದಲ್ಲಿ ನಾಯ್ಡು ಮತದಾರರ ಸಂಖ್ಯೆ ಹೇರಳವಾಗಿದೆ. ನಾಯ್ಡು ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಅಭ್ಯರ್ಥಿಗೆ ಸೂಚನೆ ನೀಡಲಾಗಿದೆ. ಆರ್ ಅಶೋಕ್ ಜೊತೆಗೇ ಇದ್ದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳಿಗೆ ಗಾಳ ಹಾಕಲಾಗುತ್ತಿದೆ. ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಪದ್ಮನಾಭ ನಗರದ ಪ್ರಮುಖ ಕಾರ್ಪೋರೇಟರ್​ಗಳಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಆರ್ ಅಶೋಕ್ ವಿರುದ್ದವಾಗಿ ಬಿಜೆಪಿ ಕಾರ್ಪೋರೇಟರ್ ಗಳು ಕೆಲಸ ಮಾಡುವ ಸಾಧ್ಯತೆ ಇದೆ. ಈ ಮೂಲಕ ಆರ್ ಅಶೋಕ್ ಗೆ ಒಳ ಏಟಿನ ಮರ್ಮಾಘಾತ ನೀಡಲು ಡಿಕೆ ಬ್ರದರ್ಸ್ ಸ್ಕೆಚ್ ಹಾಕಿದ್ದಾರೆ. ಅಲ್ಲದೆ ಪದ್ಮನಾಭ ನಗರದಲ್ಲಿ ಹೆಚ್ಚು ವಾಸವಾಗಿರುವ ಮೂಲ ಕನಕಪುರದ ನಿವಾಸಿಗಳನ್ನು ಕ್ಷೇತ್ರದಲ್ಲಿ ಒಗ್ಗೂಡಿಸುವಂತೆ ರಘುನಾಥ್ ನಾಯ್ಡು ಅವರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಬೆಳವಣಿಗೆಯನ್ನು ಖಚಿತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು ಅವರು, ಪದ್ಮನಾಭನಗರದಲ್ಲಿ 70,000 ತೆಲುಗು ಮಾತನಾಡುವವರು ಮತ್ತು 35,000 ನಾಯ್ಡುಗಳಿದ್ದಾರೆ. ಅಲ್ಲದೆ, 36,000 ಅಲ್ಪಸಂಖ್ಯಾತರು ಮತ್ತು 15,000ಕ್ಕೂ ಹೆಚ್ಚು ಕನಕಪುರ ನಿವಾಸಿಗಳು ಕ್ಷೇತ್ರದಲ್ಲಿದ್ದಾರೆ. ನಾನಿಲ್ಲಿ ಕೇವಲ ಅಭ್ಯರ್ಥಿಯಷ್ಟೇ. ತೆಲುಗು ಭಾಷಿಕ ಮತದಾರರನ್ನುದ್ದೇಶಿಸಿ ಮಾತನಾಡಿರುವ ಡಿಕೆ ಶಿವಕುಮಾರ್ ಅವರೇ ಕ್ಷೇತ್ರದ ನಿಜವಾದ ನಾಯಕ ಎಂದು ನಾಯ್ಡು ಅವರು ಹೇಳಿದ್ದಾರೆ.

2001ರಲ್ಲಿ ನಾಯ್ಡು ಅವರು, ಪದ್ಮನಾಭನಗರ ವಾರ್ಡ್‌ನಿಂದ ಕೌನ್ಸಿಲರ್ ಟಿಕೆಟ್ ಬಯಸಿದ್ದರು. 2018ರಲ್ಲಿ ವಿಧಾನಸಭೆ ಕ್ಷೇತ್ರವಾದಾಗ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಟಿಕೆಟ್ ನೀಡಿದೆ.

ರಮೇಶ್‌ಗೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಮುಖಂಡ ಎನ್‌ಆರ್‌ ರಮೇಶ್‌ ಬೆಂಬಲಿಗರು, ಜಯನಗರ ವಿಧಾನಸಭಾ ಕ್ಷೇತ್ರದಿಂದ ರಮೇಶ್‌ಗೆ ಟಿಕೆಟ್‌ ಸಿಗದಿರುವ ಹಿಂದೆ ಅಶೋಕ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಜೆಡಿಎಸ್‌ ಪಕ್ಷಕ್ಕೇ ಸೇರ್ಪಡೆಗೊಂಡು ಅಶೋಕ್ ಅವರ ವಿರುದ್ಧ ಸ್ಪರ್ಧಿಸುವಂತೆ ರಮೇಶ್ ಅವರಿಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com