ಕರ್ನಾಟಕ ಚುನಾವಣೆ: ಮಂಗಳೂರು ಎಸ್ ಡಿಪಿಐ ಅಭ್ಯರ್ಥಿ ವಿರುದ್ಧ ದೇಶದ್ರೋಹದ ಆರೋಪ, ಎನ್ ಐಎ ನಿಗಾ

ಮಂಗಳೂರು ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಮಂಗಳೂರಿನ ಉಳ್ಳಾಲ ಕ್ಷೇತ್ರದಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ದೇಶದ್ರೋಹ ಆರೋಪ ಎದುರಿಸುತ್ತಿರುವ ರಿಯಾಜ್ ಫರಂಗಿಪೇಟೆ ಅವರ ಚಲನವಲನಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೂಕ್ಷ್ಮವಾಗಿ ಗಮನಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಂಗಳೂರು ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಮಂಗಳೂರಿನ ಉಳ್ಳಾಲ ಕ್ಷೇತ್ರದಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ದೇಶದ್ರೋಹ ಆರೋಪ ಎದುರಿಸುತ್ತಿರುವ ರಿಯಾಜ್ ಫರಂಗಿಪೇಟೆ ಅವರ ಚಲನವಲನಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿಯವರೆಗೂ ಕಾಂಗ್ರೆಸ್ ಮುಖಂಡ ಯು.ಟಿ. ಖಾದರ್ ಈ ಕ್ಷೇತ್ರ ಪ್ರತಿನಿಧಿಸುವ ಮೂಲಕ ಕೈ ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು. 

ಜುಲೈ 12, 2022 ರಂದು ಬಿಹಾರದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದಾಳಿ ನಡೆಸಲು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಯಿತು. ತನಿಖೆಗಳು ಆರೋಪಿ ಗಳೊಂದಿಗೆ ರಿಯಾಜ್‌ನ ಸಂಪರ್ಕವನ್ನು ಬಹಿರಂಗಪಡಿಸಿವೆ. ಎನ್‌ಐಎ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. 2022 ರಲ್ಲಿ, ಎನ್ಐಎ ಅವರ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿತ್ತು. ಐಪಿಸಿ ಸೆಕ್ಷನ್ 120, 120 (ಬಿ), 121, 121 (ಎ), 1 ಎಸ್ 3 (ಎ), 1 ಎಸ್ 3 (ಬಿ) ಅಡಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ಇದಲ್ಲದೇ ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಂಗಳೂರು ದಕ್ಷಿಣ, ಕೊಣಾಜೆ, ಮಂಗಳೂರು ಉತ್ತರ, ಪೂರ್ವ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಗುಂಪುಗಳ ನಡುವೆ ವೈಷಮ್ಯ ಸೃಷ್ಟಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾರೆ.

ಸೋಮವಾರ ಮಂಗಳೂರು ಕ್ಷೇತ್ರಕ್ಕೆ  ನಾಮಪತ್ರ ಸಲ್ಲಿಸಿದ ರಿಯಾಜ್ ಬೃಹತ್ ಸಮಾವೇಶ ನಡೆಸಿದ್ದರು. ಹಿಜಾಬ್ ವಿವಾದ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಕರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಾದರ್ ವಿರುದ್ಧ ಎಸ್‌ಡಿಪಿಐ ಆಕ್ರಮಣಕಾರಿ ಪ್ರಚಾರ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಖಾದರ್ 2008 ರಿಂದ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಈ ಕ್ಷೇತ್ರದಿಂದ ಗೆದ್ದಿದ್ದರು. ಪ್ರಗತಿಪರ ನಾಯಕ ಎಂದೇ ಗುರುತಿಸಿಕೊಂಡಿರುವ ಖಾದರ್ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಈ ಬಾರಿ ಎಸ್ ಡಿಪಿಐನಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ಇದಾಗಿದೆ. ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com