ಕಾಂಗ್ರೆಸ್ ಭವಿಷ್ಯ ಕರ್ನಾಟಕ 'ಕೈ'ಯಲ್ಲಿ; 2024 ಲೋಕಸಭಾ ಚುನಾವಣೆಗೆ ವಿಧಾನಸಭೆ ಫಲಿತಾಂಶ ದಿಕ್ಸೂಚಿ: ಡಿ.ಕೆ ಶಿವಕುಮಾರ್ (ಸಂದರ್ಶನ)

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಂದಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಂದಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 224 ಸದಸ್ಯ ಬಲದ ವಿಧಾನಸಭೆಗೆ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ಮೇ 10 ರ ಚುನಾವಣೆಯಲ್ಲಿ ಸೋಲುವ ಭಯದಿಂದ ಆಡಳಿತಾರೂಢ ಬಿಜೆಪಿ ತನ್ನ ಸಂಪೂರ್ಣ ಕೇಂದ್ರ ನಾಯಕತ್ವವನ್ನು ರಾಜ್ಯದಲ್ಲಿ ಪ್ರಚಾರಕ್ಕೆ ನಿಯೋಜಿಸುತ್ತಿದೆ. ದಕ್ಷಿಣ ರಾಜ್ಯದಲ್ಲಿ 'ಮೋದಿ ಫ್ಯಾಕ್ಟರ್' ಕೆಲಸ ಮಾಡುವುದಿಲ್ಲ, ಜನರು ಸಂಪೂರ್ಣವಾಗಿ ಸ್ಥಳೀಯ ಮತ್ತು ಅಭಿವೃದ್ಧಿಯತ್ತ ಗಮನಹರಿಸುತ್ತಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ತಮ್ಮ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಜಗಳವಿಲ್ಲ, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮಾತ್ರ ಈಗ ಗುರಿಯಾಗಿದೆ ಎಂದು ಶಿವಕುಮಾರ್ ಹೇಳಿದರು.

ಅಸೆಂಬ್ಲಿ ಚುನಾವಣೆ ಸ್ಥಳೀಯ ವಿಷಯಗಳ ಮೇಲೆ ಮಾತ್ರವೇ ಅಥವಾ ಮೋದಿ ವರ್ಸಸ್ ರಾಹುಲ್ ಇರಬಹುದೇ?

ಇದು ಮೋದಿ ಅಥವಾ ಯಾವುದೇ ಇತರ ರಾಷ್ಟ್ರೀಯ ನಾಯಕರಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ, ಇದು ಕರ್ನಾಟಕದ ಆಡಳಿತದೊಂದಿಗೆ ಸಂಪರ್ಕ ಹೊಂದಿದೆ, ಕರ್ನಾಟಕ ಸರ್ಕಾರ ಹೇಗೆ ವಿಫಲವಾಗಿದೆ ಮತ್ತು ಕಾಂಗ್ರೆಸ್ ಪಕ್ಷ ಏನು ಮಾಡಬಹದು ಎಂಬ ಬಗ್ಗೆ.

ಕರ್ನಾಟಕ ಶಾಂತಿಪ್ರಿಯ ರಾಜ್ಯ, ಜನರು ಹೆಚ್ಚು ಪ್ರಬುದ್ಧರು. ಈ ದೇಶದ ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಹೆಬ್ಬಾಗಿಲು. ಅವರು (ಬಿಜೆಪಿ) ಭಾವನಾತ್ಮಕ ಸಮಸ್ಯೆಗಳನ್ನು ಎತ್ತುತ್ತಿದ್ದಾರೆ, ನಾವು ಅಭಿವೃದ್ಧಿ ವಿಷಯಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ. ಬೆಲೆ ಏರಿಕೆ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಮೇಲೆ ಪರಿಣಾಮ ಬೀರುತ್ತಿದೆ, ನಾವು ಅವರಿಗೆ ಸಹಾಯ ಮಾಡಲು ಬಯಸುತ್ತೇವೆ.

ಮೂರೂವರೆ ವರ್ಷಗಳ ಕಾಲ ಬಿಜೆಪಿಯ "ಡಬಲ್ ಇಂಜಿನ್" ಸರ್ಕಾರವಿತ್ತು, ಅದು ಸಂಪೂರ್ಣವಾಗಿ ವಿಫಲವಾಗಿದೆ. ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಇತ್ತು, ಮತ್ತು 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳಿವೆ ಎಂದು ಸರ್ಕಾರ ಹೇಳಿಕೊಂಡಿತು, ಆದರೆ ಮಲೆನಾಡು ಅಥವಾ ಕರಾವಳಿ ಪ್ರದೇಶದಂತಹ ಬಿಜೆಪಿ ಪ್ರಬಲವಾಗಿರುವ ಸ್ಥಳಗಳಲ್ಲಿ ಒಬ್ಬನೇ ಒಬ್ಬ ಹೂಡಿಕೆದಾರನೂ ಉದ್ಯೋಗಗಳನ್ನು ಸೃಷ್ಟಿಸಲು ಹೋಗಲಿಲ್ಲ ನಿರುದ್ಯೋಗ ಹೆಚ್ಚಾಗಿದೆ.

ಕರ್ನಾಟಕವು ಜ್ಞಾನದ ರಾಜಧಾನಿಯಾಗಿದೆ ಮತ್ತು ಹಿಜಾಬ್ ಮತ್ತು ಹಲಾಲ್‌ನಂತಹ ಅನಗತ್ಯ ಭಾವನಾತ್ಮಕ ಸಮಸ್ಯೆಗಳ ನಂತರ, ಜನರು ಭಯಭೀತರಾಗಿದ್ದಾರೆ. ಇಂತಹ ಸಂಗತಿಗಳು ರಾಜ್ಯದ ಅಭಿವೃದ್ಧಿಗೆ ಸಮಸ್ಯೆ ಸೃಷ್ಟಿಸುತ್ತಿವೆ.

ರಾಷ್ಟ್ರೀಯವಾಗಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ಕರ್ನಾಟಕ ಚುನಾವಣಾ ಫಲಿತಾಂಶ ಸಹಾಯವಾಗುತ್ತದೆಯೇ?

ಕರ್ನಾಟಕ ಜನತೆ ದೇಶಕ್ಕೆ ಸಂದೇಶ ನೀಡಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಲಿದೆ,  ಈ ಹಿಂದೆಯೂ ದೇವರಾಜ್ ಅರಸು (ಮಾಜಿ ಸಿಎಂ) ರಾಷ್ಟ್ರಮಟ್ಟದಲ್ಲಿ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಕರ್ನಾಟಕ ಕಾಂಗ್ರೆಸ್‌ಗೆ ಬಾಗಿಲು ತೆರೆದಿತ್ತು, ಈಗ ಮತ್ತೆ ಕರ್ನಾಟಕ ತನ್ನ ಪಾತ್ರವನ್ನು ನಿರ್ವಹಿಸಲಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ನ ನಿರೀಕ್ಷೆಗಳೇನು?

ಸಮೀಕ್ಷೆಗಳ ಆಧಾರದ ಮೇಲೆ ನಾನು 141 ಸೀಟು ಗೆಲ್ಲಲಿದ್ದೇವೆ ಎಂದು ನಂಬಿದ್ದೇನೆ. ಕಳೆದ 35 ವರ್ಷಗಳಿಂದ ನಾನು ವಿಧಾನಸಭೆಯಲ್ಲಿದ್ದೇನೆ. ಎಂಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ, ಒಂದರಲ್ಲಿ ಸೋತಿದ್ದೇನೆ, ಏಳರಲ್ಲಿ ಗೆದ್ದಿದ್ದೇನೆ. ರಾಜಕೀಯ ಅಂಕಗಣಿತ ಮತ್ತು ಸಾಮಾಜಿಕ ಎಂಜಿನಿಯರಿಂಗ್ ಮೂಲಕ ನಾವು ದೊಡ್ಡ ಸಂಖ್ಯೆಯಲ್ಲಿ ಗೆಲ್ಲುತ್ತೇವೆ.

ಸಿಎಂ ಸ್ಥಾನಕ್ಕಾಗಿ ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವಿನ 'ಜಗಳ'ದ ಬಗ್ಗೆ ಹೇಳಿ?

ಜಗಳ ಎಲ್ಲಿ? ನೀವು ನನಗೆ ಒಂದು ಉದಾಹರಣೆ, ಒಂದು ಘಟನೆ ತೋರಿಸಿ. ನಾನು (ಬಿಜೆಪಿ ನಾಯಕ ಬಿಎಸ್) ಯಡಿಯೂರಪ್ಪನವರಂತೆ ಹುದ್ದೆಗಾಗಿ ಅಳಲಿಲ್ಲ. ನಾವು ಒಗ್ಗಟ್ಟಾಗಿ ನಿಂತಿದ್ದೇವೆ, ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ, ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ತಮಗೆ ಸಿಎಂ ಆಗಲು ಇದೇ ಉತ್ತಮ ಅವಕಾಶವಲ್ಲವೇ?

ಇದು ಸದಸ್ಯದ ವಿಷಯವಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿಯನ್ನು ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತನ್ನದೇ ಆದ ಚುನಾವಣಾ ಪ್ರಕ್ರಿಯೆಯ ಮೇಲೆ ನಿರ್ಧರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ತನ್ನ ಚುನಾವಣಾ ಗ್ಯಾರಂಟಿ ಬಗ್ಗೆ ಟೀಕಿಸಿದರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿ ವರ್ಷ ಅವುಗಳ ಅನುಷ್ಠಾನಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳ ಅಗತ್ಯವಿದೆ ಎಂದಿದ್ದಾರಲ್ಲ?

ಪ್ರಧಾನಿ ಮತ್ತು ಹಣಕಾಸು ಸಚಿವರು ತಾವು ಭರವಸೆ ನೀಡಿದ್ದನ್ನು ಈಡೇರಿಸಲು ಸಾಧ್ಯವಾಗದೆ ತುಂಬಾ ಕಂಗಾಲಾಗಿದ್ದಾರೆ. ನೀವು ಅವರ ಹಿಂದಿನ ಪ್ರಣಾಳಿಕೆಯನ್ನು ತೆಗೆದುಕೊಳ್ಳಿ, ಅವರು ಹತ್ತು ಗಂಟೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು, ಅವರು ಅದನ್ನು ಏಕೆ ನೀಡಲಿಲ್ಲ? ರೈತರ 1 ಲಕ್ಷ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು, 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು, (ಕೃಷಿ) ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು, ಆದರೆ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಹಾಗಲ್ಲ. ನಾವು ಏನೇ ಭರವಸೆ ನೀಡಿದರೂ ನಾವು ಬಸವಣ್ಣನ (12 ನೇ ಶತಮಾನದ ಸಮಾಜ ಸುಧಾರಕ) ನಾಡಿನಲ್ಲಿದ್ದೇವೆ. ನಾವು ಹೇಳಿದ್ದನ್ನೆಲ್ಲ ಮಾಡುತ್ತೇವೆ.

ಇಡೀ ಬಿಜೆಪಿ ನಾಯಕರನ್ನು ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ನಿಯೋಜಿಸಲಾಗಿದೆಯಲ್ಲ?

ಅವರು ಭಯದಲ್ಲಿದ್ದಾರೆ, ಬಿಜೆಪಿ ಸರ್ಕಾರದ ಅಡಿಯಲ್ಲಿ ಕರ್ನಾಟಕ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ. 'PayCM', 'PayMinister', ಕರ್ನಾಟಕದ ಪ್ರತಿಯೊಂದು  ಹುದ್ದೆಯು ಮಾರಾಟಕ್ಕಿದೆ. ಎಸಿಪಿ, ಸರ್ಕಲ್ ಇನ್ಸ್‌ಪೆಕ್ಟರ್, ತಹಶೀಲ್ದಾರ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಪಾವತಿಸಬೇಕಾದ ಹಣದ ಬಗ್ಗೆ ಮಾಧ್ಯಮಗಳು ಹೋಟೆಲ್ ಮೆನು ಕಾರ್ಡ್‌ನಂತೆ  ರೇಟ್ ಕಾರ್ಡ್‌ನೊಂದಿಗೆ ಹೊರಬಂದಿವೆ ಎಂಬುದನ್ನು ತೋರಿಸಿವೆ.

ಈ ಚುನಾವಣೆಯಲ್ಲಿ "ಮೋದಿ ಫ್ಯಾಕ್ಟರ್ ಮತ್ತು ಮೋದಿ ಮ್ಯಾಜಿಕ್" ಪ್ರಭಾವದ ಬಗ್ಗೆ ಏನು ಹೇಳುತ್ತೀರಿ?

ವಿಧಾನಸಭೆ ಚುನಾವಣೆಯಲ್ಲಿ ಯಾವುದೂ ಕೆಲಸ ಮಾಡುವುದಿಲ್ಲ, ಯಾವುದೇ ಕೇಂದ್ರ ನಾಯಕರ ಮ್ಯಾಜಿಕ್ ಕೆಲಸ ಮಾಡುವುದಿಲ್ಲ. ನೀವು (ಜನರ) ಹೊಟ್ಟೆ ತುಂಬಿಸಿದ್ದರೆ ಮಾತ್ರ, ನೀವು ಉತ್ತಮ ಆಡಳಿತ ನೀಡಿದ್ದರೆ, ಜನರು ನಿಮ್ಮ ಬಗ್ಗೆ ಯೋಚಿಸುತ್ತಾರೆ, ಬೇರೆ ಏನೂ ಕೆಲಸ ಮಾಡುವುದಿಲ್ಲ. ತಮಿಳುನಾಡು ಅಥವಾ ಕೇರಳ ಅಥವಾ ಪಶ್ಚಿಮ ಬಂಗಾಳದಲ್ಲಿ ಇದು (ಮೋದಿ ಅಂಶ) ಎಲ್ಲಿ ಕೆಲಸ ಮಾಡಿದೆ? ಇದು ಕೆಲಸ ಮಾಡಲಿಲ್ಲ, ಅಲ್ಲಿ ಏನಾಗಿತ್ತೋ ಇಲ್ಲಿಯೂ ಅದೇ  ನಡೆಯುತ್ತದ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com