ದೆಹಲಿಯಲ್ಲಿ ಇಂದು ಕಾಂಗ್ರೆಸ್ ಹೈಮಾಂಡ್ ಸಭೆ: ಶಾಸಕರು-ನಾಯಕರ ಅಸಮಾಧಾನ, ಲೋಕಸಭೆ ಚುನಾವಣೆ ಅಜೆಂಡಾ

ಇಂದು ಆಗಸ್ಟ್ 2 ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಂದ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹೈವೋಲ್ಟೇಜ್ ಸಭೆ ನಡೆಯಲಿದ್ದು, ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಿರುವುದು ಸಭೆಯ ಹೈಲೈಟ್ ಆಗಿದೆ.
ಕಾಂಗ್ರೆಸ್ ಪಕ್ಷದ ಕಚೇರಿ ಸಾಂದರ್ಭಿಕ ಚಿತ್ರ
ಕಾಂಗ್ರೆಸ್ ಪಕ್ಷದ ಕಚೇರಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂದು ಆಗಸ್ಟ್ 2 ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಂದ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹೈವೋಲ್ಟೇಜ್ ಸಭೆ ನಡೆಯಲಿದ್ದು, ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಿರುವುದು ಸಭೆಯ ಹೈಲೈಟ್ ಆಗಿದೆ.

ಕೆಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಹಣದ ಕೊರತೆ ಮತ್ತು ಸಚಿವರ ಕಾರ್ಯವೈಖರಿ ಕುರಿತು ಸಿಎಂಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ಅವರು ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಮಾಡಿರುವ ಟೀಕೆಗಳು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು.

ಶಾಸಕರ ಅಸಮಾಧಾನಕ್ಕೆ ಮದ್ದು ಅರೆಯಲೆಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕಳೆದ ವಾರ ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ಕರೆದಿದ್ದರು. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನದ ಮಾತುಗಳನ್ನಾಡಿರುವುದು ಸಹ ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡು ಚರ್ಚೆಯಾಗುತ್ತಿದೆ.

ಇಂತಹ ಪರಿಸ್ಥಿತಿ ಮಧ್ಯೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ಕರೆಯಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಕೂಡ ಕಾಂಗ್ರೆಸ್ ಗುರಿಯಾಗಿದೆ. ಹೀಗಾಗಿ ಇಂದು ರಾಜ್ಯ ನಾಯಕರ ಜೊತೆ ಹೈಕಮಾಂಡ್ ನಾಯಕರು ನಡೆಸುತ್ತಿರುವ ಸಭೆ ಮಹತ್ವದ್ದಾಗಿದೆ. ರಾಜ್ಯ ನಾಯಕರ ನಡುವಿನ ಅಸಮಾಧಾನದ ಬೇಗುದಿಗೂ ಹೈಕಮಾಂಡ್ ಮದ್ದು ಅರೆಯಲಿದೆ.

ಲೋಕಸಭಾ ಚುನಾವಣೆ ಸಿದ್ದತೆ, ಪಕ್ಷದ ಸಂಘಟನೆ ಹಾಗೂ ಇನ್ನಿತರ ವಿಚಾರವಾಗಿ ದೆಹಲಿಯಲ್ಲಿ ವರಿಷ್ಠರ ಜೊತೆಗೆ ಮೂರು ಹಂತದ ಸಭೆ ನಡೆಯಲಿದೆ. ದೆಹಲಿಗೆ ಹೋಗ್ತಿದ್ದೇನೆ. ದೆಹಲಿಯಲ್ಲಿ ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಲೋಕಸಭೆ, ಪಕ್ಷದ ಹಿತದೃಷ್ಟಿಯಿಂದ ಹೋಗುತ್ತಿದ್ದೇವೆ ಎಂದು ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ, ಶಿವಕುಮಾರ್, ರಾಜ್ಯದ 19 ಹಿರಿಯ ಸಚಿವರು, ಎಐಸಿಸಿ ಪದಾಧಿಕಾರಿಗಳು ಸೇರಿದಂತೆ 37 ಉನ್ನತ ನಾಯಕರೊಂದಿಗೆ ಮಧ್ಯಾಹ್ನ 3 ರಿಂದ 5.30 ರ ನಡುವೆ ಸಭೆ ನಡೆಸಲಿದ್ದು, 2024 ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತದೆ. ಇದರ ನಂತರ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. 

ಲೋಕಸಭೆ ಚುನಾವಣೆ, ಪಕ್ಷದ ಹಿತಾಸಕ್ತಿ, ಚುನಾವಣಾ ಕಾರ್ಯತಂತ್ರ ಮತ್ತು ಜವಾಬ್ದಾರಿ ಹಂಚಿಕೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಮೂರು ಭಾಗಗಳಲ್ಲಿ ನಡೆಯಲಿರುವ ಸಭೆಗೆ ಸಚಿವರು ಮಾತ್ರವಲ್ಲದೆ ಶಾಸಕರು, ಸಂಸದರು ಹಾಗೂ ಪಕ್ಷದ ಹಿರಿಯ ಮುಖಂಡರನ್ನೂ ಆಹ್ವಾನಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ಅಧಿಕಾರಿಗಳ ವರ್ಗಾವಣೆಯಂತಹ ಹಲವಾರು ವಿಷಯಗಳ ಬಗ್ಗೆ ಶಾಸಕರ ಸಮಾಲೋಚನೆ ನಡೆಸದಿರುವ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಹರಿಪ್ರಸಾದ್ ಗೆ ಮಣೆ, ಬೋಸರಾಜು ಔಟ್?: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಅವರನ್ನು ಸಭೆಗೆ ಆಹ್ವಾನಿಸಿದ 37 ಪ್ರಮುಖ ನಾಯಕರಲ್ಲಿ ಸೇರಿದ್ದಾರೆ. ಅವರು ಇಂದು ಸಭೆಯಲ್ಲಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎತ್ತುವ ನಿರೀಕ್ಷೆಯಿದೆ ಎಂದು ಮೂಲಗಳು ಸೇರಿಸಲಾಗಿದೆ.

ಯಾವ ನಾಯಕರು ಭಾಗಿ?: ಈ ಸಭೆಯಿಂದ ವಿಧಾನ ಪರಿಷತ್ ಸದಸ್ಯ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೊರಗಿಟ್ಟಿರುವುದು ಕುತೂಹಲ ಮೂಡಿಸಿದೆ.  ಸಚಿವರಾದ ಡಾ.ಜಿ.ಪರಮೇಶ್ವರ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಸೇರಿದಂತೆ ಹಿರಿಯ ನಾಯಕರು ಸಭೆಗೆ ಆಗಮಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಮತ್ತು ಚಂದ್ರಪ್ಪ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಎಐಸಿಸಿ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯ್ ಕುಲಕರ್ಣಿ, ರಮೇಶ್ ಕುಮಾರ್, ಸಂಸದ ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಡಾ. ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಡಾ.ಎಲ್.ಹನುಮಂತಯ್ಯ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಾಜಿ ಸಚಿವ ಎಂ.ಆರ್.ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ಸುಧಾಮ್ ದಾಸ್ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಮೂಲಕ ಖಾಲಿ ಇರುವ ಮೂರು ಎಂಎಲ್‌ಸಿ ಸ್ಥಾನಗಳನ್ನು ಭರ್ತಿ ಮಾಡಲು ಸಿದ್ದರಾಮಯ್ಯ ಅವರು ಇಂದಿನ ಸಭೆಯಲ್ಲಿ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com