ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 20 ಸೀಟು ಗೆಲ್ಲುವುದು ನಮ್ಮ ಗುರಿ: ಹೈಕಮಾಂಡ್ ಮೀಟಿಂಗ್ ಬಳಿಕ ಸಿಎಂ, ಡಿಸಿಎಂ

ರಾಜಧಾನಿ ದೆಹಲಿಯಲ್ಲಿ ನಿನ್ನೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ, ಮಾಜಿ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಂಪುಟ ಸಚಿವರ ಸಭೆ ನಡೆದಿದೆ.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಿಎಂ, ಡಿಸಿಎಂ ಮತ್ತು ರಾಜ್ಯ ಸಚಿವ ಸಂಪುಟ ನಾಯಕರು
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಿಎಂ, ಡಿಸಿಎಂ ಮತ್ತು ರಾಜ್ಯ ಸಚಿವ ಸಂಪುಟ ನಾಯಕರು

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಿನ್ನೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ, ಮಾಜಿ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಂಪುಟ ಸಚಿವರ ಸಭೆ ನಡೆದಿದೆ.

ಲೋಕಸಭೆ ಚುನಾವಣೆ ಜವಾಬ್ದಾರಿ: ನಿನ್ನೆ ಮಧ್ಯಾಹ್ನ ಸಂಪುಟ ಸಚಿವರ ಮತ್ತು ಸಾಯಂಕಾಲ ಇತರ ಕಾಂಗ್ರೆಸ್ ನಾಯಕರ ಸಭೆಯೂ ನಡೆದಿದೆ. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿರುವ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಆದರೂ ಕೂಡ ಕೆಲವು ಜಿಲ್ಲೆಗಳಿಗೆ ವಿಶೇಷವಾಗಿ ಸಚಿವರನ್ನು ನೇಮಕ ಮಾಡುತ್ತೇವೆ. ಅವರಿಗೆ ಮುಂದಿನ ವರ್ಷದ ಲೋಕಸಭೆ ಚುನಾವಣೆ ಜವಾಬ್ದಾರಿ ವಹಿಸಲಾಗುವುದು ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬುದು ನಮ್ಮ ಗುರಿಯಾಗಿದೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನರ ಒಲವಿದೆ. ನಾವು ನುಡಿದಂತೆ ನಡೆದಿದ್ದೇವೆ. ಗೆದ್ದು ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ನಾನು ಮತ್ತು ಡಿ ಕೆ ಶಿವಕುಮಾರ್ ಸಹಿ ಮಾಡಿ ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ಹಂಚಿದ್ದೆವು. ಬಿಜೆಪಿಯವರು ಮತ್ತು ಜೆಡಿಎಸ್ ನವರು ನಮಗೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದರು ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿಯವರೇ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ. ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹಣವಿಲ್ಲ ಎಂದು ದೂರಿದರು, ಅದು ಸಂಪೂರ್ಣವಾಗಿ ಸುಳ್ಳು. ನೂರಕ್ಕೆ ನೂರು ಅಸತ್ಯ. ನಾವು 5 ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಹಣವನ್ನು ನೀಡಿದ್ದೇವೆ. ಈಗಾಗಲೇ 4 ಗ್ಯಾರಂಟಿಗಳು ಜಾರಿಯಾಗುತ್ತಿವೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಕರ್ನಾಟಕ ರಾಜಕಾರಣದಲ್ಲಿ ಒಗ್ಗಟ್ಟಿನ ಪ್ರದರ್ಶನವನ್ನು ನಾವು ಮಾಡಿದ್ದು, ಒಗ್ಗಟ್ಟಿನಿಂದ ಯಾವ ರೀತಿ ಚುನಾವಣೆ ಎದುರಿಸಬೇಕೆಂದು ಕರ್ನಾಟಕವನ್ನು ಮಾದರಿಯಾಗಿ ತೋರಿಸಿದ್ದೇವೆ, ನುಡಿದಂತೆ ನಡೆದಿದ್ದೇವೆ. ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ತೀವಿ: ಈಗ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಹೆಚ್ಚಾಗಿದ್ದು, ಅದರಂತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಸೀಟುಗಳನ್ನು ಕರ್ನಾಟಕದಿಂದ ಗೆದ್ದು ಕೊಡುತ್ತೇವೆ ಎಂದು ಇಂಡಿಯಾ ಮೈತ್ರಿಕೂಟಕ್ಕೆ ಮಾತು ಕೊಟ್ಟಿದ್ದೇವೆ. ಆ ಪ್ರಕಾರ ಎಲ್ಲರೂ ಸೇರಿ ಪ್ರತಿ ನಾಯಕರು ಜವಾಬ್ದಾರಿ, ಬದ್ಧತೆ ತೋರಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com