Ajay Singh
Ajay Singh

ಸಚಿವ ಸ್ಥಾನ ಸಿಗದ್ದಕ್ಕೆ ಮುನಿಸು: ರೆಬೆಲ್ ಶಾಸಕರ ಪಟ್ಟಿಯಲ್ಲಿ ಅಜಯ್ ಸಿಂಗ್? ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಗೈರು!

ರಾಜ್ಯದ ಆಡಳಿತರೂಢ ಕಾಂಗ್ರೆಸ್​ ಪಕ್ಷದಲ್ಲಿ ಸಚಿವರ ವಿರುದ್ಧ ಸ್ವಪಕ್ಷದ ಶಾಸಕರು ಅಸಮಾಧಾನ ಹೊರಹಾಕುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಪುತ್ರನೂ ಆಗಿರುವ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಶಾಸಕ ಡಾ. ಅಜಯ್​ ಸಿಂಗ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು: ರಾಜ್ಯದ ಆಡಳಿತರೂಢ ಕಾಂಗ್ರೆಸ್​ ಪಕ್ಷದಲ್ಲಿ ಸಚಿವರು ಮತ್ತು ಸ್ವಪಕ್ಷದ ಶಾಸಕರ ನಡುವಣ ಮುಸುಕಿನ ಗುದ್ದಾಟದ ನಡುವೆಯೇ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಪುತ್ರನೂ ಆಗಿರುವ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಶಾಸಕ ಡಾ. ಅಜಯ್​ ಸಿಂಗ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಆಗಸ್ಟ್ 5 ರಂದು ಕಲಬುರಗಿಯಲ್ಲಿ ನಡೆದ ‘ಗೃಹ ಜ್ಯೋತಿ’ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದ ಆಜಯ್ ಸಿಂಗ್ ಅವರು, ಮಂಗಳವಾರ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಿದ್ದರಾಮಯ್ಯ ನಡೆಸಿದ ಕಲಬುರಗಿ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದರು.

200 ಯುನಿಟ್ ​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಇಂದು ಕಲಬುರಗಿ ನಗರದಲ್ಲಿ ಚಾಲನೆ ನೀಡಲಾಯಿತು. ಆದರೆ ತನ್ನ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದರು. ಅಜಯ್ ಸಿಂಗ್ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ಕಾಂಗ್ರೆಸ್​​ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಡಾ.ಅಜಯ್​ ಸಿಂಗ್​ ಗೈರು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.

ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಶಾಸಕರಾದ ಬಸರಾಜ ರಾಯರೆಡ್ಡಿ, ಬಿಆರ್ ಪಾಟೀಲ್ ಅಸಮಾಧಾನ ಹೊರಹಾಕಿದ್ದು, ರಾಯರೆಡ್ಡಿ ಅವರಂತೂ ನೇರನೇರವಾಗಿ ಮುನಿಸು ಬಹಿರಂಗಪಡಿಸುತ್ತಿದ್ದಾರೆ. ಅಲ್ಲದೆ, ಕೆಲವು ಶಾಸಕರು ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿದ್ದರು. ಈ ಎಲ್ಲಾ ಬಂಡಾಯ ಶಾಸಕರ ಪಟ್ಟಿಗೆ ಇದೀಗ ಅಜಯ್ ಸಿಂಗ್ ಅವರು ಸೇರ್ಪಡೆಗೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಕಮಲ ಪಾಳಯ ಧರಂಸಿಂಗ್ ಅವರ ಕುಟುಂಬವನ್ನು ತಮ್ಮತ್ತ ಸೆಳೆಯಲು ಹಲವು ವರ್ಷಗಳಿಂದಲೂ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಈಗಲೂ ಕೂಡ ವದಂತಿಗಳನ್ನು ಹಬ್ಬಿಸುತ್ತಿದೆ. ಆದರೆ, ಧರಂ ಸಿಂಗ್ ಅವರ ಪತ್ನಿ ಪ್ರಭಾವತಿ ಅವರು, ಪಕ್ಷ ಬದಲಾಯಿಸದಂತೆ ತಮ್ಮ ಮಕ್ಕಳಿಗೆ ಸಲಹೆ ನೀಡಿದ್ದಾರೆ ಎಂದು ಕೈ ಪಾಳಯದ ನಾಯಕರೊಬ್ಬರು ಹೇಳಿದ್ದಾರೆ.

ಅಜಯ್ ಮತ್ತು ಪ್ರಿಯಾಂಕ್ ಇಬ್ಬರೂ ಮೂರು ಬಾರಿ ಶಾಸಕರಾಗಿದ್ದಾರೆ, ಮೂರು ಬಾರಿ ಸಚಿವರೂ ಆಗಿದ್ದಾರೆ. ಅಜಯ್ ಸಿಂಗ್ ಅವರು ಇದೀಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ವಿಧಿ ಅನುಷ್ಠಾನದ ಕ್ಯಾಬಿನೆಟ್ ಉಪಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಜಯ್ ಅವರನ್ನು ಸರ್ಕಾರ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅಜಯ್ ಸಿಂಗ್ ಅವರ ಅಣ್ಣ ವಿಜಯ್ ಸಿಂಗ್ ಅವರು ಕಾಂಗ್ರೆಸ್ ಟಿಕೆಟ್‌ ಪಡೆದು ಬಸವಕಲ್ಯಾಣದಿಂದ ಸ್ಪರ್ಧೆಗಿಳಿಸಿದ್ದರು. ಆದರೆ, ಸೋಲು ಕಂಡಿದ್ದರು. ಇವರ ಸೋದರ ಮಾವ ಬೀದರ್ ದಕ್ಷಿಣದಿಂದ ಬಂಡಾಯ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು, ಇದು ಹೈಕಮಾಂಡ್ ಕೆರಳುವಂತೆ ಮಾಡಿತ್ತು ಎಂದು ನಾಯಕರೊಬ್ಬರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಅವರ ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯ ಮೇಲುಗೈ ಸಾಧಿಸಿದ್ದೇ ಆದರೆ, ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯುಂಟಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com