ವಿದ್ಯುತ್ ಕಡಿತ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ: ಸಿ.ಟಿ ರವಿ

ಕಾಂಗ್ರೆಸ್ ರಾಜ್ಯವನ್ನು ಕತ್ತಲೆಗೆ ತಳ್ಳುತ್ತಿದ್ದು, ವಿದ್ಯುತ್ ಕಡಿತವು ರಾಜ್ಯಕ್ಕೆ ಅವರು ನೀಡಿದ ಕೊಡುಗೆಯಾಗಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಅವರು ಸೋಮವಾರ ಹೇಳಿದರು.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಕಾಂಗ್ರೆಸ್ ರಾಜ್ಯವನ್ನು ಕತ್ತಲೆಗೆ ತಳ್ಳುತ್ತಿದ್ದು, ವಿದ್ಯುತ್ ಕಡಿತವು ರಾಜ್ಯಕ್ಕೆ ಅವರು ನೀಡಿದ ಕೊಡುಗೆಯಾಗಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಅವರು ಸೋಮವಾರ ಹೇಳಿದರು.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ ನಂತರ ಸಿಟಿ ರವಿಯವರು ಮಾತನಾಡಿದರು.

ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ವರ್ಗಾವಣೆ ವಿಚಾರದಲ್ಲಿ ಶಾಸಕರು ಮತ್ತು ಸಚಿವರ ನಡುವೆ ಜಟಾಪಟಿ ನಡೆಯುತ್ತಿದ್ದು, ಶಾಸಕರು ಮತ್ತು ಸಚಿವರ ನಡುವಿನ ಸಂಬಂಧ ಹಳಸಿದೆ ಎಂದು ಹೇಳಿದರು.

ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಈಗ ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿದೆ ಎಂದು ತಿಳಿಸಿದರು.

ಆಗಸ್ಟ್ 28 ರಂದು ಈ ಎಲ್ಲಾ ಸಮಸ್ಯೆಗಳನ್ನು ಎತ್ತಿ ಹಿಡಿದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಸೆಪ್ಟೆಂಬರ್ 8 ರವರೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತೊಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಶೇ.40 ಕಮಿಷನ್ ಆರೋಪದ ತನಿಖೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ನೇಮಿಸಲಾಗಿದೆ, ಆದರೆ, ಅವರು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂಬ ವಿಶ್ವಾಸ ನಮಗೆ ಇಲ್ಲ.ದತ್ತ ಪೀಠದ ವಿಚಾರ ಸೇರಿದಂತೆ ಹಲವು ತನಿಖೆಗಳಲ್ಲಿ ಅವರು ಕಾಂಗ್ರೆಸ್‌ ಸೂಚನೆ ಮೇರೆಗೆ ನಡೆದುಕೊಂಡಿದ್ದರು ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com