ಸಿಎಂ ಸಿದ್ದರಾಮಯ್ಯಗೆ ಮೊದಲಿದ್ದಷ್ಟು ಸ್ವಾತಂತ್ರ್ಯ ಈಗ ಇಲ್ಲ: ಮಾಜಿ ಸಚಿವ ಹೆಚ್‌.ಆಂಜನೇಯ

2013ರಿಂದ 2018ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಬಡವರ, ಶೋಷಿತರ ಪಾಲಿಗೆ ಸುವರ್ಣ ಯುಗವಾಗಿತ್ತು. ಆ ಯುಗ ಇನ್ನು ಬರಲಾರದು ಎಂದು ಎನಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಆಗ ಇದ್ದ ಸ್ವಾತಂತ್ರ್ಯ ಈಗ ಇಲ್ಲ ಎಂದು ಮಾಜಿ ಸಚಿವ ಎಚ್‌ ಆಂಜನೇಯ ಅವರು ಶುಕ್ರವಾರ ಹೇಳಿದರು.
ಸಚಿವ ಹೆಚ್‌.ಆಂಜನೇಯ
ಸಚಿವ ಹೆಚ್‌.ಆಂಜನೇಯ

ಬೆಂಗಳೂರು: 2013ರಿಂದ 2018ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಬಡವರ, ಶೋಷಿತರ ಪಾಲಿಗೆ ಸುವರ್ಣ ಯುಗವಾಗಿತ್ತು. ಆ ಯುಗ ಇನ್ನು ಬರಲಾರದು ಎಂದು ಎನಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಆಗ ಇದ್ದ ಸ್ವಾತಂತ್ರ್ಯ ಈಗ ಇಲ್ಲ ಎಂದು ಮಾಜಿ ಸಚಿವ ಎಚ್‌ ಆಂಜನೇಯ ಅವರು ಶುಕ್ರವಾರ ಹೇಳಿದರು.

ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಐಎಚ್‌ಎಸ್‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ ಪಿ ಸಿಂಗ್‌  ಪ್ರಶಸ್ತಿ ಪ್ರಧಾನ ಮಾಡಿ ಸಚಿವರು ಮಾತನಾಡಿದರು.

ಆ ಅವಧಿಯಲ್ಲಿ ಕ್ರಾಂತಿಕಾರಕ ಕೆಲಸಗಳು ಆಗಿದ್ದವು. ಹಿಂದಿನ ದಿನ ಚರ್ಚೆಯಾದರೆ, ಮರುದಿನವೇ ಜಾರಿಯಾಗುತ್ತಿತ್ತು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಅಂಥ ಸ್ವಾತಂತ್ರ್ಯ ಮುಖ್ಯಮಂತ್ರಿಯವರಿಗೆ ಇಲ್ಲ ಎಂದನ್ನಿಸುತ್ತಿದೆ. ಶಾಸಕರ ಒತ್ತಡವೂ ಸೇರಿದಂತೆ ಬೇರೆ ಬೇರೆ ವಿಚಾರಗಳು ಇದಕ್ಕೆ ಕಾರಣ ಇರಬೇಕು’ ಎಂದು ವಿಶ್ಲೇಷಿಸಿದರು.

ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರು, ಎಚ್‌ ಕಾಂತರಾಜು ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಜಾತಿ ಗಣತಿ ನಡೆಸುವಂತೆ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ವರದಿ ಅಂಗೀಕಾರವಾಗಿಲ್ಲ. ಎಸ್‌ಸಿ ಕೋಟಾ ವರ್ಗೀಕರಣದ ಕುರಿತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡನೆಯೂ ವಿಳಂಬವಾಗಿದೆ. ಸಿದ್ದರಾಮಯ್ಯನವರಿಗೆ ಸ್ವಾತಂತ್ರ್ಯ ಇದ್ದಿದ್ದರೆ ಅದನ್ನು ತಕ್ಷಣವೇ ಮಾಡುತ್ತಿದ್ದರು. ವಿವಿಧ ಮೂಲೆಗಳಿಂದ ಒತ್ತಡ ಮತ್ತು ಪಕ್ಷದ 136 ಶಾಸಕರನ್ನು ನಿಭಾಯಿಸುವುದು ಸೇರಿದಂತೆ ಹಲವು ಅಂಶಗಳು ಇವುಗಳ ವಿಳಂಬಕ್ಕೆ ಕಾರಣವಾಗಿವೆ.

ಸಿದ್ದರಾಮಯ್ಯನವರು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ವರದಿಯನ್ನು ಅಂಗೀಕರಿಸುತ್ತಾರೆಂಯೇ ಎಂಬ ಅನುಮಾನವೂ ಇದೆ. ಆದರೆ, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅವರು ಬಡವರ ಶೋಷಿತರ ಕೈ ಹಿಡಿಯುತ್ತಾರೆ ಎಂದು ಹೇಳಿದರು.

ಮೀಸಲಾತಿ ಪಡೆಯದ ಜಾತಿ ಯಾವುದಿದೆ? ಎಲ್ಲಾ ಜಾತಿಗಳಿಗೂ ಮೀಸಲಾತಿ ಇದೆ. ಬ್ರಾಹ್ಮಣರಿಗೂ ಮೀಸಲಾತಿ ಇದೆ. ಅವರು ಹೋರಾಟ ಮಾಡದೇ ಶೇ.10 ಮೀಸಲಾತಿ ಪಡೆದಿದ್ದಾರೆ. 80ರ ದಶಕದಲ್ಲಿ ದೇವರಾಜ ಅರಸು ಅವಧಿಯಲ್ಲಿ ಹಾವನೂರು ಆಯೋಗದ ವರದಿಯನ್ನು ಜಾರಿಗೆ ಮಾಡಲೂ ಬಿಡಲಿಲ್ಲ. ಆದರೂ ಅವರು ಬಿಡುಗಡೆ ಮಾಡಿದರು.

ಈಗ ಕಾಂತರಾಜ ಸಮಿತಿ ವರದಿಯ ಬಗ್ಗೆಯೂ ಅಪಸ್ವರ ಎತ್ತುತ್ತಿದ್ದಾರೆ. ನಾನು ಮಾದಿಗ, ಕಾಂತರಾಜ ಅವರು ಕುರುಬ. ತಮ್ಮ ತಮ್ಮ ಜಾತಿಯ ಸಂಖ್ಯೆಯನ್ನು ಹೆಚ್ಚು ಬರೆದಿದ್ದಾರೆ ಎಂದು ಕೆಲವರು ಸುಳ್ಳು ಹಬ್ಬಿಸುತ್ತಿದ್ದಾರೆ. ಒಂದೂವರೆ ಲಕ್ಷ ಗಣತಿದಾರರು ಮಾಹಿತಿ ಸಂಗ್ರಹಿಸಿದ್ದಾರೆ. ಮನೆ ಮನೆಗೆ ಹೋಗಿ ವಾಸ್ತವಾಂಶ ಮಾಹಿತಿ ಪಡೆದಿದ್ದಾರೆ. ಎಲ್ಲ ಮಾಹಿತಿ ಕಂಪ್ಯೂಟರ್‌ನಲ್ಲಿ ಭದ್ರವಾಗಿದೆ. ಬಹಳ ವೈಜ್ಞಾನಿಕ ವರದಿ, ಪಾರದರ್ಶಕವಾಗಿದೆ. ಪ್ರೊಸೀಡಿಂಗ್ಸ್‌ ಆಗಿದೆ. ಜಾರಿ ಮಾಡಲು ಉಪಸಮಿತಿ ಮಾಡಿ ಅದರಲ್ಲಿ ಏನು ಕೊರತೆ ಇದೆ. ಯಾವುದು ಸೇರಬೇಕು ಎಂಬ ನಿರ್ಧಾರ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಅಧಿವೇಶನದಲ್ಲಿ ಚರ್ಚೆಗೆ ಇಡಲಿ” ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com