ಬಂಡಾಯದಿಂದ ಹಿಂದೆ ಸರಿಯಲ್ಲ: ಸಿಎಂ ಇಬ್ರಾಹಿಂ

ಬಂಡಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು  ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.
ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ

ಬೆಂಗಳೂರು: ಬಂಡಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು  ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರಿನ ಕಾಡುಗೊಂಡನಹಳ್ಳಿಯ ಖಾಸಗಿ ಸಭಾಭವನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಭೆಯಲ್ಲಿ ಜಾತ್ಯತೀತ ಜನತಾದಳದ ರಾಷ್ಟ್ರೀಯ ಘಟಕದ ನೂತನ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ಆಯ್ಕೆ ಮಾಡಲಾಯಿತು.

86 ವರ್ಷ ನಾಣು ಅವರು ಜೆಡಿಎಸ್‌ನ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು, ಈ ಹಿಂದೆ ಕೇರಳ ರಾಜ್ಯ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ 'ಬಂಡಾಯ' ಪಾಳಯದ ನಾಯಕರಾಗಿ ನಾಣು ಅವರು ಕಣಕ್ಕಿಳಿದಿದ್ದಾರೆ.

ಸಭೆ ವೇಳೆ ಮಾತನಾಡಿರುವ ಸಿಎಂ ಇಬ್ರಾಹಿಂ ಅವರು, ಜಾತ್ಯತೀತ ಸಿದ್ಧಾಂತದ ಮೇಲೆ ನಿಂತಿರುವ ಜೆಡಿಎಸ್‌, ಮಹಾತ್ಮಾ ಗಾಂಧೀಜಿ ಅವರ ತತ್ವಗಳನ್ನು ಪಾಲಿಸುವ ಪಕ್ಷವಾಗಿದೆ. ಆದರೆ ಗಾಂಧೀಜಿ ಅವರನ್ನು ವಿರೋಧಿಸುವವರೊಂದಿಗೆ ಜೆಡಿಎಸ್‌ ಸಖ್ಯ ಬೆಳೆಸುವುದು ಸರಿಯೇ ಎಂದು ಪ್ರಶ್ನಿಸಿದರು.

ಕಳೆದ ಅನೇಕ ವರ್ಷಗಳಿಂದ ಜನತಾದಳದಲ್ಲಿ ಇದ್ದೇನೆ. ಹಿಂದಿನ ಸಭೆಗಳಲ್ಲಿ ಪಕ್ಷದ ವರಿಷ್ಠ ದೇವೇಗೌಡ ಅವರೊಂದಿಗೆ ನಾನು ಭಾಗಿಯಾಗಿದ್ದೇನೆ. ನನ್ನನ್ನು ಜನತಾದಳದಿಂದ ಉಚ್ಚಾಟಿಸಿದ ದೇವೇಗೌಡರೇ ಜೆಡಿಎಸ್‌ ಸದ್ಯ ಸಖ್ಯ ಬೆಳೆಸಿರುವ ಕ್ರಮ ಸರಿಯೇ ಎಂಬುದಕ್ಕೆ ಉತ್ತರಿಸಬೇಕು’ ಎಂದು ಹೇಳಿದರು.

ನೀವು ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಇದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವ ನಾನೂ ಸೇರಿದಂತೆ ಇತರರಿಗೂ ಇದೆ. ಗಾಂಧೀಜಿಯವರ ತತ್ವಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಎಚ್.ಡಿ.ದೇವೇಗೌಡರ ವರ್ತನೆಯನ್ನು ಇಂದಿನ ಸಭೆಯಲ್ಲಿ ನಾವು ಖಂಡಿಸುತ್ತೇವೆ. ದೇವೇಗೌಡ ಅವರು ಲೋಕಸಭೆ ಸ್ಥಾನ ಹಾಗೂ ಕುಟುಂಬಸ್ಥರಿಗಾಗಿ ತಮ್ಮ ಜಾತ್ಯಾತೀತತೆಯ ಬದ್ಧತೆಯನ್ನು ತ್ಯಾಗ ಮಾಡಿದ್ದಾರೆಂದು ಗುಡುಗಿದರು.

ನಾವು I.N.D.I.A ಜೊತೆ ಇದ್ದೇವೆ. ಎನ್‌ಡಿಎ ಜೊತೆ ಅಲ್ಲ, ಮೈತ್ರಿ ನಾಯಕರಾದ ರಾಹುಲ್ ಗಾಂಧಿ, ನಿತೀಶ್ ಕುಮಾರ್, ಅಖಿಲೇಶ್ ಯಾದವ್ ಮತ್ತು ಇತರರೊಂದಿಗೆ ಮಾತುಕತೆ ನಡೆಸುತ್ತೇವೆಂದು ಇದೇ ವೇಳೆ ಹೇಳಿದರು.

ಬಳಿಕ ಮಾತನಾಡಿದ ಸಿಕೆ.ನಾಣು ಅವರು, ಗಾಂಧೀಜಿಯವರ ತತ್ವಗಳನ್ನು ಬಿಟ್ಟುಕೊಡದೇ ಅದೇ ಜಾತ್ಯತೀತ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ನಮ್ಮ ನೇತೃತ್ವದ ಪಕ್ಷವೇ ನಿಜವಾದ ಜನತಾದಳ. ಜಾತ್ಯತೀತ ಗುಣವೇ ನಮ್ಮ‌ ಪಕ್ಷದ ಆತ್ಮವಿದ್ದಂತೆ. ಹೀಗಾಗಿ ಯಾರು ಏನೇ ಹೇಳಲಿ ನಾವು ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com