ಬರ ಬರಲಿ ಎಂದು ರೈತರು ಕಾಯ್ದು ಕೂತಿರಲಿಲ್ಲ, ಕಾಂಗ್ರೆಸ್ ಕಾಲ್ಗುಣದಿಂದ ಬರಗಾಲ ಬಂದಿದೆ: ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ಬಿಜೆಪಿ ಕಿಡಿ

ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತೆ ಎಂಬ ಸಚಿವ ಶಿವಾನಂದ ಪಾಟೀಲ್​​ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತೆ ಎಂಬ ಸಚಿವ ಶಿವಾನಂದ ಪಾಟೀಲ್​​ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಜ್ಞಾನಿಗಳು ಅವಿವೇಕಿಗಳೇ ತುಂಬಿದ್ದಾರೆ. ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ನಾಲಿಗೆ ಹರಿಬಿಟ್ಟಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಇದೀಗ ರೈತರು ಬರಗಾಲ ಬರಲಿ ಎಂದು ಕಾಯುತ್ತಿರುತ್ತಾರೆ ಎಂದಿದ್ದಾರೆ. ಬರ ಬರಲಿ ಎಂದು ರೈತರು ಕಾಯ್ದು ಕೂತಿರಲಿಲ್ಲ, ಕಾಂಗ್ರೆಸ್ ಕಾಲ್ಗುಣದಿಂದ ಬರಗಾಲ ಬಂದಿದೆ ಎನ್ನುವುದು ಅಷ್ಟೇ ಸತ್ಯ. ರೈತ ವಿರೋಧಿ ಸರ್ಕಾರ ಅನ್ನದಾತನನ್ನು ಅಪಹಾಸ್ಯ, ಅವಮಾನ ಮಾಡುತ್ತಾ ಅವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದೆ.

ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಅವರು ಪ್ರತಿಕ್ರಿಯೆ ನೀಡಿ, ಸಚಿವ ಶಿವಾನಂದ ಪಾಟೀಲ್​ ಈ ಹಿಂದೆಯೂ ರೈತರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮೊದಲು ಒಂದು ಲಕ್ಷ ಪರಿಹಾರ ಇತ್ತು, ಈಗ 5 ಲಕ್ಷ ರೂ. ಕೊಡುತ್ತಾರೆ. ಅದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ.ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತನಾಡಿ, ಈ ಸರ್ಕಾರ ರೈತರನ್ನು ಪದೇ ಪದೆ ಅವಮಾನ ಮಾಡುತ್ತಿದೆ. ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತೆ. ಶಿವಾನಂದ ಪಾಟೀಲ್​ ರೈತರ ಬಳಿ ಕ್ಷಮೆಯಾಚಿಸಬೇಕು. ಶಿವಾನಂದ ಪಾಟೀಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಅವರು ಮಾತನಾಡಿ, ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ. ರೈತರು ಬರದಿಂದ ಸಾಯುತ್ತಾರೆ ಅನ್ನೋದು ರೈತರಿಗೆ ಮಾಡಿದ ಅಪಮಾನ. ಮಣ್ಣನ್ನೇ ಪೂಜೆಸಿ, ಮಣ್ಣಲ್ಲೇ ಬೆರತು, ಜಗತ್ತಿಗೆ ಆಹಾರ ಹಂಚೋರು ರೈತರು. ಇದು ಸರ್ಕಾರದ ಅಹಂಕಾರದ ಒಂದು ಭಾವನೆ. ಪಿತ್ತ ನೆತ್ತಿಗೇರಿ ಅಹಂಕಾರದ ಸ್ಥಿತ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸಿಎಂಗೆ ಮನವಿ ಮಾಡುತ್ತೇನೆ, ನೀವೇ ನಿಮ್ಮ ಸಚಿವರ ಮದ ಇಳಿಸಿ. ಇಲ್ಲವಾದರೆ ಜನ ನಿಮ್ಮನ್ನೂ ಸೇರಿಸಿ ಎಲ್ಲಾ ಸಚಿವರ ಮದ ಇಳಿಸುತ್ತಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com