ಸಿದ್ದರಾಮಯ್ಯ ಸರ್ ಬ್ರಿಲಿಯಂಟ್ ಫಾದರ್; ಮನೆಯಲ್ಲಿ ವಯೋವೃದ್ಧ ತಾಯಿ ತಂಗಿ ಇದ್ದಾರೆ, ಅವರನ್ನು ಅರೆಸ್ಟ್ ಮಾಡಿಬಿಡಿ!
ಮೈಸೂರು: ಸಿದ್ದರಾಮಯ್ಯ ಸರ್ ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟಿಷಿಯನ್. ನಿಮ್ಮ ಮಗನನ್ನ ಎಂಪಿ ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಹೋದರ ವಿಕ್ರಮ್ ಸಿಂಹ ಬಂಧನದ ನಂತರ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ನಿಮ್ಮ ಮಗನಿಗಾಗಿ ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವನ ತೆಗೆಯಬಹುದು ಅಷ್ಟೇ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಮರಗಳ್ಳತನ ಪ್ರಕರಣದಲ್ಲಿ ಸಹೋದರ ವಿಕ್ರಂ ಸಿಂಹ ಬಂಧನದ ಬಗ್ಗೆ ಮಾತನಾಡುವಾಗ ಸಂಸದರು ಭಾವುಕರಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮನೆಯಲ್ಲಿ ವಯೋವೃದ್ಧ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ, ಅವರನ್ನು ಅರೆಸ್ಟ್ ಮಾಡಿಬಿಡಿ. ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬವನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ ಎಂದು ನೊಂದು ಮಾತನಾಡಿದ್ದಾರೆ.
ಮಾನ್ಯ ಸಿದ್ದರಾಮಯ್ಯ ಅವರಲ್ಲಿ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಶ್ಲಾಘನೆ ಮಾಡಬೇಕು ಅಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇಂತಹ ತಂದೆ ಎಲ್ಲರಿಗೂ ಸಿಗಲ್ಲ. ನೀವೊಬ್ಬ ಬ್ರಿಲಿಯೆಂಟ್ ಫಾದರ್. ನಿಜಕ್ಕೂ ನಿಮ್ಮನ್ನ ಮೆಚ್ಚಿದ್ದೇನೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ತಿರುಗೇಟು ನೀಡಿದ್ದಾರೆ.
ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು, ಕೋರ್ಟ್ ನಿಂದ 6 ತಿಂಗಳು ಜೈಲು ವಾಸಕ್ಕೆ ಒಳಗಾಗಿದ್ದು ಮಧು ಬಂಗಾರಪ್ಪ, ಆದರೆ ಅರೆಸ್ಟ್ ಮಾಡಿದ್ದು ಪ್ರತಾಪ್ ಸಿಂಹನ ಸಹೋದರನ. ನಿಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ, ನಿಮ್ಮ ಮಗನ ಭವಿಷ್ಯಕ್ಕಾಗಿ ನನ್ನ ಕುಟುಂಬವನ್ನೇ ಬಲಿತೆಗೆದುಕೊಳ್ಳಲು ಹೊರಟರಲ್ಲಾ ಸಾರ್? ಎಂದು ಪ್ರಶ್ನಿಸಿದ್ದಾರೆ.

