
ಬೆಂಗಳೂರು: ಅದಾನಿ ವಿಚಾರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳ ಕುರಿತು ಉತ್ತರ ನೀಡುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳ ಕುರಿತು ಪ್ರತೀ ರಾಜ್ಯದಲ್ಲಿರುವ ಪ್ರತೀಯೊಬ್ಬ ಸಂಸದ, ಶಾಸಕ, ಎಂಎಲ್'ಸಿಗಳು ಪ್ರಧಾನಿ ಮೋದಿಗೆ ಪತ್ರ ಬರೆಯಬೇಕೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರುಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್ ಕೆ ಪಾಟೀಲ್ ಅವರು ಮಾತನಾಡಿ, ರಾಹುಲ್ ಗಾಂಧಿಯವರ ಪ್ರಶ್ನೆಗಳ ಕುರಿತು ನೇರವಾಗಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಲು ಆರಂಭಿಸುತ್ತೇವೆ. ಪ್ರಶ್ತಿಸುವ ನಮ್ಮ ಹಕ್ಕನ್ನು ಕಸಿದುಕೊಳ್ಳಲು ಪ್ರಧಾನಮಂತ್ರಿಗಳಿಗೆ ಅವಕಾಶ ನೀಡುವುದಿಲ್ಲ. ಪ್ರಶ್ನೆಗಳನ್ನು ಕೇಳುವ ವ್ಯಕ್ತಿಯನ್ನು ಧಿಕ್ಕರಿಸುವ ಬಿಜೆಪಿಯ ವರ್ತನೆ ಪ್ರಜಾಸತ್ತಾತ್ಮಕವಲ್ಲ. ಅದನ್ನು ಸ್ವೀಕರಿಸಲು ಸಾಧ್ಯವೂ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಮೋದಿಯವರಿಗೆ ಪತ್ರ ಬರೆಯುವ ಕುರಿತು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಈ ಕುರಿತು ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಿ, ಅವರ ಪ್ರತಿಕ್ರಿಯೆಯನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್'ನ ಚುನಾಯಿತ ಸದಸ್ಯರು ಪ್ರಧಾನಿ ಮೋದಿಗೆ ಕೇಳಲು ಬಯಸುತ್ತಿರುವ ಪ್ರಶ್ನೆಗಳು ಇಂತಿವೆ...
ಚುನಾವಣಾ ಬಾಂಡ್‌ಗಳ ಮೂಲಕ ಕಳೆದ 20 ವರ್ಷಗಳಲ್ಲಿ ಅದಾನಿ ಎಷ್ಟು ಹಣವನ್ನು ಬಿಜೆಪಿಗೆ ನೀಡಿದ್ದಾರೆ? ಎಂಬ ಪ್ರಶ್ನೆಗಳನ್ನು ಕೇಳಲು ಬಯಸಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು ಅದಾನಿ ವಿಚಾರ ಕುರಿತು ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆರು ವಿಮಾನ ನಿಲ್ದಾಣಗಳನ್ನು ಅದಾನಿಗೆ ಹಸ್ತಾಂತರಿಸಲು ನಿಯಮಗಳನ್ನು ಏಕೆ ಬದಲಾಯಿಸಲಾಯಿತು ಎಂದು ಪ್ರಶ್ನಿಸಿದ್ದರು. ಶ್ರೀಲಂಕಾ ಸರ್ಕಾರದೊಂದಿಗೆ ಅದಾನಿ ವ್ಯವಹಾರಗಳನ್ನು ಮುಂದುವರಿಸಲು ಮತ್ತು ಅದಾನಿಗೆ ವಿದ್ಯುತ್ ಯೋಜನೆಗಳನ್ನು ನೀಡಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಯಿತು ಎಂದು ಆರೋಪಿಸಿದ್ದರು.
Advertisement