ನಮ್ಮ ಸರ್ಕಾರ ಬಂದ ಮೇಲೆ ಅದಾಯ್ತು, ಇದಾಯ್ತು‌ ಅಂತ ಬುರುಡೆ ಬಿಡೋ ಬದಲು ಮಲ್ಲೇಶ್ವರಂಗೆ ಹೋಗಿ ಅಭಿವೃದ್ಧಿ ಮಾಡಿ: ಅನಿತಾ ಕುಮಾರಸ್ವಾಮಿ

ತಾಲೂಕು ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಗೆ ನನ್ನ ಹೆಸರು ಹಾಕಲಾಗಿದೆ. ಆದರೆ, ನಾನು ಬರುವುದಕ್ಕೂ ಮುನ್ನವೇ ಉದ್ಘಾಟನೆ ಮಾಡಲಾಗಿದೆ. ಕಾಟಾಚಾರಕ್ಕೆ ನನ್ನನ್ನು ಕರೆದಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿ

ರಾಮನಗರ: ರಾಮನಗರ ಜಿಲ್ಲೆಗೆ 5ನೇ ತಾಲೂಕು ಆಗಿ ಹಾರೋಹಳ್ಳಿ ರೂಪುಗೊಂಡಿದೆ. ಕನಕಪುರ ತಾಲೂಕಿನ ಭಾಗವಾಗಿದ್ದ ಹಾರೋಹಳ್ಳಿಯನ್ನು ತಾಲೂಕು ಆಗಿ ಉದ್ಘಾಟನೆ ಮಾಡುವ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಅದೇ ಕಾರ್ಯಕ್ರಮದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಅವರ ಮೇಲೆ ಗರಂ ಆಗಿ ಭಾಷಣ ಮಾಡಿದ ಘಟನೆ ನಡೆದಿದೆ.

ತಾಲೂಕು ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಗೆ ನನ್ನ ಹೆಸರು ಹಾಕಲಾಗಿದೆ. ಆದರೆ, ನಾನು ಬರುವುದಕ್ಕೂ ಮುನ್ನವೇ ಉದ್ಘಾಟನೆ ಮಾಡಲಾಗಿದೆ. ಕಾಟಾಚಾರಕ್ಕೆ ನನ್ನನ್ನು ಕರೆದಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಆದರೆ, ಅವರ ಟೀಕೆಗಳಿಗೆ, ಪ್ರಶ್ನೆಗಳಿಗೆ ಉತ್ತರ ಕೊಡಲು ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಇರಲೇ ಇಲ್ಲ. ವಿಧಾನಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅವರು ಕಾರ್ಯಕ್ರಮ ನೆರವೇರಿಸಿ ಹೊರಟು ಹೋಗಿದ್ದರು. ಆದರೆ, ಅನಿತಾ ಅವರು ಸುಮ್ಮನಾಗಲಿಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಸಚಿವರ ವಿರುದ್ಧ ಟೀಕೆಗಳನ್ನು ಮಾಡಿದರು.

2019ರಲ್ಲಿ ಹಾರೋಹಳ್ಳಿ ನೂತನ ತಾಲೂಕಾಗಿ ಘೋಷಣೆ ಆಗಿತ್ತು. ಈ ತಾಲೂಕು ರಚನೆಗೆ ನನ್ನ ಶ್ರಮ ಇದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನೂತನ ತಾಲೂಕಿಗೆ ಅನುಮೋದನೆ ಪಡೆದಿದ್ದೇನೆ. ಉಸ್ತುವಾರಿ ಸಚಿವರು ಈಗ ಹೇಳಿದ ನೀರಾವರಿ ಯೋಜನೆ ಆಗಿದ್ದೂ ಕುಮಾರಸ್ವಾಮಿ ಕಾಲದಲ್ಲಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿದ್ದಾರೆ. ಅವರು ಬಂದಿದ್ರೆ ಬೇರೆ ಯಾರೂ ಮಾತನಾಡ್ತಿರಲಿಲ್ಲ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ನಮ್ಮ ಸರ್ಕಾರ ಬಂದ ಮೇಲೆ ಅದಾಯ್ತು, ಇದಾಯ್ತು ಅಂತಾರೆ‌. ಬರೀ ಬುರುಡೆ ಬಿಡೋದಷ್ಟೇ ಮಾತ್ರ ಇವರಿಗೆ ಗೊತ್ತು. ಸಚಿವರು ಮಲ್ಲೇಶ್ವರಂಗೆ ಹೋಗಿ ಅಭಿವೃದ್ಧಿ ಮಾಡಲಿ. ನಾನು‌ ಶಿವನ ಭಕ್ತೆ. ಮಲ್ಲೇಶ್ವರಂನ ಕಾಡುಮಲ್ಲೇಶ್ಚರ ದೇವಸ್ಥಾನಕ್ಕೆ ಹೋಗ್ತಿರ್ತಿನಿ. ಅಲ್ಲಿಯ ಅಭಿವೃದ್ಧಿಯನ್ನೂ ನೋಡಿದ್ದೇನೆ ಎನ್ನುತ್ತಾ ಭಾಷಣದುದ್ದಕ್ಕೂ ಅಶ್ವತ್ಥ್ ನಾರಾಯಣ್ ವಿರುದ್ಧ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇನ್ನು, ನೂತನ ತಾಲೂಕು ಕಚೇರಿ ಉದ್ಘಾಟನೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಅವರನ್ನು ಕಡೆಗಣಿಸಿದ್ದಕ್ಕೆ ಗಲಾಟೆ ಮಾಡಿದರು. ಅನಿತಾ ಕುಮಾರಸ್ವಾಮಿ ಅವರ ಹೆಸರು ಚಿಕ್ಕದಾಗಿ ಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರು ಕೊನೆಯಲ್ಲಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಜನರ ಪ್ರೀತಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದ ಅವರು, ಈ ಹಾರೋಹಳ್ಳಿ ತಾಲೂಕು ರಚನೆಗೆ ನನ್ನ ಶ್ರಮ ಇದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನೂತನ ತಾಲೂಕುಗೆ ಅನುಮೋದನೆ ಪಡೆದಿದ್ದೇನೆ. ಈಗ ವಿವಿಧ ಅಧಿಕಾರಿಗಳ ಹುದ್ದೆಗಳಿಗೆ ಅನುಮೋದನೆ ನೀಡುವ ಬಗ್ಗೆಯೂ ಸರ್ಕಾರಕ್ಕೆ ಪತ್ರ ಬರೆದು ಕೆಲಸ ಮಾಡಿಸಿದ್ದೇನೆ.

ಈ ಎರಡು ಹೋಬಳಿಗಳು ಹಿಂದೆ ಯಾವ ರೀತಿ ಇದ್ದವು. ಈಗ ಯಾವ ರೀತಿ ಇವೆ ಎಂಬುದು ಜನರಿಗೆ ಗೊತ್ತಿದೆ. ಕ್ಷೇತ್ರದಲ್ಲಿ ಸೇತುವೆ ನಿರ್ಮಾಣವಾಗಿದ್ದು ನಮ್ಮ ಕಾಲದಲ್ಲೇ. ಉಸ್ತುವಾರಿ ಸಚಿವರು ಈಗ ಹೇಳಿದ ನೀರಾವರಿ ಯೋಜನೆ ಆಗಿದ್ದೂ ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರವಿದ್ದ ಕಾಲದಲ್ಲಿ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com