ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಲು ಯಡಿಯೂರಪ್ಪ ಕಾರಣ: ಪಕ್ಷಕ್ಕಾಗಿ ಮನೆ–ಮಠ ಬಿಟ್ಟು ದುಡಿದವರು; ರಾಜಾಹುಲಿಯನ್ನು ಹಾಡಿ ಹೊಗಳಿದ 'ಹಿಂದೂ ಹುಲಿ'!

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವುದರೊಂದಿಗೆ, ವಿಧಾನಸಭೆಯಲ್ಲಿ ಮಾಡಿದ ವಿದಾಯದ ಭಾಷಣಕ್ಕೆ ಪಕ್ಷಾತೀತವಾಗಿ ಶಾಸಕರಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
Updated on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವುದರೊಂದಿಗೆ, ವಿಧಾನಸಭೆಯಲ್ಲಿ ಮಾಡಿದ ವಿದಾಯದ ಭಾಷಣಕ್ಕೆ ಪಕ್ಷಾತೀತವಾಗಿ ಶಾಸಕರಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಬಿಜೆಪಿ, ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಅವರು ಅಳಲು ತೋಡಿಕೊಂಡ ರೀತಿಯನ್ನು ರಾಜ್ಯದ ಜನರು ಅದರಲ್ಲೂ ಲಿಂಗಾಯತರು ಎಂದಿಗೂ ಮರೆಯುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಹೇಳಿದರು.

ಅಧಿವೇಶನದ ವಿದಾಯ ದಿನವನ್ನು ರಾಜಕೀಯ ಮೈಲೇಜ್ ತೆಗೆದುಕೊಳ್ಳಬೇಡಿ ಎಂದು ಖಂಡ್ರೆ ಅವರಿಗೆ  ಜೆ.ಸಿ ಮಾಧುಸ್ವಾಮಿ ಸಲಹೆ ನೀಡಿದರು. ನಾನು ರಾಜಕೀಯ ಮಾಡುತ್ತಿಲ್ಲ, ಆದರೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಖಂಡ್ರೆ ಪ್ರತಿಕ್ರಿಯಿಸಿದರು.

ಮುಂದಿನ ಬಾರಿ  ಈಶ್ವರ ಖಂಡ್ರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಮಾಧುಸ್ವಾಮಿ ವ್ಯಂಗ್ಯವಾಡಿದರು. ಯಡಿಯೂರಪ್ಪ ಅವರು ಸ್ವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ, ವಯಸ್ಸಾದ ಕಾರಣ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದರು ಎಂದು ಅವರು ಮಾಧುಸ್ವಾಮಿ ಸಮರ್ಥಿಸಿಕೊಂಡರು.

ವಯಸ್ಸಾಗಿದ್ದರೂ ಚುನಾವಣಾ ರಾಜಕೀಯದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸಕ್ರಿಯರಾಗಿದ್ದಾರೆ ಎಂದು ಖಂಡ್ರೆ ಅವರಿಬ್ಬರ ಉದಾಹರಣೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬಂದರೇ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗುವುದಾದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಬಯಸಿದ್ದರು.

ನನ್ನ ಮತ್ತು ಯಡಿಯೂರಪ್ಪ ಮಧ್ಯೆ ವೈಮನಸ್ಸು ಇದ್ದರೂ, ಅವರು ನಮ್ಮ ನಾಯಕರು. ಮನೆ–ಮಠ ಬಿಟ್ಟು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದವರು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಮತ್ತು ಅನಂತಕುಮಾರ್ ರಾಜ್ಯದಲ್ಲಿ ನಮ್ಮ ಪಕ್ಷವನ್ನು ಕಟ್ಟಿದ ಜೋಡಿ. ಕೃಷ್ಣ– ಅರ್ಜುನರಂತೆ ಇದ್ದರು’ ಎಂದು ನೆನಪಿಸಿಕೊಂಡರು. ಯತ್ನಾಳ ಅವರು ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ಮಾಡುತ್ತಾ ಬಂದಿದ್ದರು. ಆದರೆ, ವಿದಾಯ ಭಾಷಣದ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿ ಆಗಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಆ ಸ್ಥಾನ ಸಿಗಲು ಯಡಿಯೂರಪ್ಪ ಮತ್ತು ಅನಂತಕುಮಾರ್‌ ಕಾರಣರು. ಯಡಿಯೂರಪ್ಪ ನಮ್ಮನ್ನು ಬೆಳೆಸಿದರು. ಪಕ್ಷಕ್ಕಾಗಿ ಮನೆ–ಮಠ ಬಿಟ್ಟು ದುಡಿದವರು. ಆದರೆ, ಈ ಬಾರಿ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಛೇಡಿಸಿದರು.

1983ರಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿ ರಾಜಕೀಯ ಜೀವನ ಆರಂಭಿಸಿದ್ದ ಯಡಿಯೂರಪ್ಪನವರ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಿರುವುದು ಆತಂಕದ ಸಂಗತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಯಡಿಯೂರಪ್ಪ ಅವರಂತೆ ಸವಾಲು– ಸಮಸ್ಯೆಗಳನ್ನು ಎದುರಿಸಿದ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ. ರೈತರು, ನೀರಾವರಿ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು. ಯಡಿಯೂರಪ್ಪ ಅವರು ತಮ್ಮ ಗುರು ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಹೇಳಿದರು. ವಿಧಾನಸಭೆಯಲ್ಲಿ ಸಾಕಷ್ಟು ಮಹಿಳಾ ಪ್ರಾತಿನಿಧ್ಯವನ್ನು ಬಯಸಿದ ಯಡಿಯೂರಪ್ಪ ಅವರದ್ದು ತಂದೆಯಂತ ವ್ಯಕ್ತಿತ್ವ ಎಂದು ರೂಪಾಲಿ ನಾಯ್ಕ್ ಮತ್ತು ಪೂರ್ಣಿಮಾ ಮತ್ತು ಕಾಂಗ್ರೆಸ್‌ನ ರೂಪಕಲಾ ಶಶಿಧರ್ ಅವರು ಬಣ್ಣಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com