ಶಿಕಾರಿಪುರ ಜನತೆಗೆ ಚಿರಋಣಿ, ನಮಗೆಲ್ಲರಿಗೂ ಮಾಜಿ ಪ್ರಧಾನಿ ದೇವೇಗೌಡರು ಆದರ್ಶ: ವಿದಾಯ ಭಾಷಣದಲ್ಲಿ ಬಿ ಎಸ್ ಯಡಿಯೂರಪ್ಪ

ವಿಧಾನಸಭೆ ಚುನಾವಣೆ-2023ಕ್ಕೆ ದಿನ ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ ರಾಜ್ಯ ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣೀಭೂತ, ಮಾಧ್ಯಮ ಮಂದಿಯಿಂದ 'ರಾಜಾಹುಲಿ' ಎಂದು ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸಭೆ ಚುನಾವಣೆ-2023ಕ್ಕೆ ದಿನ ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ ರಾಜ್ಯ ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣೀಭೂತ, ಮಾಧ್ಯಮ ಮಂದಿಯಿಂದ 'ರಾಜಾಹುಲಿ' ಎಂದು ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ತಮ್ಮ ರಾಜಕೀಯದ ಆರಂಭ ದಿನಗಳಿಂದ ಪಕ್ಷ ಕಟ್ಟಿಕೊಂಡು ಬಂದ ರೀತಿ ಇಂದಿನವರೆಗಿನ ರಾಜಕೀಯ ಜೀವನವನ್ನು ಮೆಲುಕು ಹಾಕಿದರು. 

ಕರ್ನಾಟಕ ವಿಧಾನ ಸಭೆಯಲ್ಲಿ ಇದು ಅವರ ಕೊನೆಯ ಭಾಗವಹಿಸುವಿಕೆ. 15ನೇ ವಿಧಾನಸಭೆಯ ಅಧಿವೇಶನದಲ್ಲಿಂದು ಕೊನೆಯ ಬಾರಿಗೆ ವಿದಾಯ ಭಾಷಣ ಮಾಡಿದ್ದಾರೆ ಯಡಿಯೂರಪ್ಪನವರು. ತಾವು ಚುನಾವಣಾ ರಾಜಕೀಯಕ್ಕೆ ಮಾತ್ರ ವಿದಾಯ ಹೇಳುತ್ತಿದ್ದು ಸಕ್ರಿಯ ರಾಜಕಾರಣಕ್ಕೆ ಅಲ್ಲ, ತಮ್ಮ ಕೊನೆಯ ಉಸಿರು ಇರುವವರೆಗೂ ಬಿಜೆಪಿ ಪರ ಕೆಲಸ ಮಾಡುತ್ತಿರುವುದಾಗಿಯೂ ಯಡಿಯೂರಪ್ಪನವರು ವಿಶೇಷವಾಗಿ ಒತ್ತಿ ಹೇಳಿದ್ದಾರೆ.

ಇಂದು ಯಡಿಯೂರಪ್ಪನವರು ಏನೆಂದರು?: ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದನಕ್ಕೆ ಆಯ್ಕೆಯಾಗಿ ಬರಬೇಕು. ಅದಕ್ಕೆ ಪುರುಷ ಸದಸ್ಯರು ಹೆಚ್ಚಿನ ಪ್ರೋತ್ಸಾಹ ನೀಡಬೇಕು. 

ಶಿಕಾರಿಪುರ ತಾಲೂಕಿನ ಜನರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಅಂದೇ ಏರ್​ಪೋರ್ಟ್​ ಉದ್ಘಾಟನೆಗೆ ಬರುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ಹೇಳಿದರು. 

ಪಕ್ಷ ಕಟ್ಟುವಾಗ ನಾನು ಸಭೆಗೆ ಹೋಗಿ ಭಾಷಣ ಶುರು ಮಾಡಿದ ಮೇಲೆಯೇ ಅಟಲ್​ ಬಿಹಾರಿ ವಾಜಪೇಯಿ, ಮುರಳಿ ಮನೋಹರ್ ಜೋಷಿ ಬರುತ್ತಿದ್ದರು. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಆರ್​ಎಸ್​​ಎಸ್ ಕಾರಣ. RSSನಲ್ಲಿ ಸಿಕ್ಕಿದ ತರಬೇತಿಯಿಂದ ನನಗೆ ಇಷ್ಟೆಲ್ಲಾ ಸ್ಥಾನಮಾನ ಸಿಕ್ಕಿದೆ ಎಂದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಎಸ್​​ಸಿ, ಎಸ್​​ಟಿ ಸಮುದಾಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಅದರ ಫಲ ಸಿಗಲಿದೆ. ಮತ್ತೆ ರಾಜ್ಯದಲ್ಲಿ ಓಡಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ನೀವೆಲ್ಲರೂ ಮತ್ತೆ ಆಯ್ಕೆಯಾಗಿ ಬರಬೇಕು. ಆಡಳಿತ ಪಕ್ಷದ ಯಾರೂ ವಿಚಲಿತರಾಗಬೇಕಿಲ್ಲ. ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದೊಂದಿಗೆ ನಾವು ಹೋಗಬೇಕಾಗಿದೆ ಎಂದು ಆಡಳಿತ ಪಕ್ಷಕ್ಕೆ ಕಿವಿ ಮಾತು ಹೇಳಿದರು.

ನಮಗೆಲ್ಲರಿಗೂ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರೇ ಆದರ್ಶ. ಈ ವಯಸ್ಸಿನಲ್ಲೂ ಕೂಡ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೆಚ್​.ಡಿ.ದೇವೇಗೌಡರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ. ಈ ವಯಸ್ಸಲ್ಲೂ ಕೂಡ ಅವರು ನಮ್ಮ ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ಚಿಂತನೆ ಮಾಡುತ್ತಾರೆ. ಅವರಿಂದ ಕಲಿಯುವುದು ನಮಗೆ ಬಹಳಷ್ಟಿದೆ ಎಂದರು.

ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಂತ್ರಿಯಾಗಿ:ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭೆ ಅಧ್ಯಕ್ಷರಾಗಿ ಸದನದ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು. ಮುಂದಿನ ಅಧಿವೇಶನದಲ್ಲಿ ನೀವು ಸ್ಪೀಕರ್ ಪೀಠದಲ್ಲಿ ಕೂರದೇ ಮಂತ್ರಿಗಳಾಗಿ ಇರಬೇಕು. ಇದನ್ನು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಕಾರ್ಯವೈಖರಿಗೆ ಬಿಎಸ್​ವೈ ಮೆಚ್ಚುಗೆ:ವಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. 

ಬಗರುಹುಕುಂ ಸಾಗುವಳಿ ರೈತರ ಪರ ಹೋರಾಟ:ನನ್ನ ರಾಜಕೀಯ ಜೀವನದಲ್ಲಿ  ಬಗರುಹುಕುಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಸಿಗಲು ಹೋರಾಟ ನಡೆಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಸಾಮಾನ್ಯ ಪುರಸಭೆಯ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ ಆಗುವವರೆಗೂ ಬೆಳೆದಿದ್ದೇನೆ. ರಸ್ತೆ ಸರಿಯಿಲ್ಲದ ಸಮಯದಲ್ಲಿ ನಾನು ಅಟಲ್‌ ಬಿಹಾರಿ ವಾಜಪೇಯಿ ಅವರ ಜೊತೆ ಓಡಾಡಿ ಪಕ್ಷ ಸಂಘಟಿಸಿದ್ದೇನೆ ಎಂದರು.

ನನ್ನ ಜೊತೆ ಆಗ ಯಾರು ಇರಲಿಲ್ಲ, ಮೊದಲು ನಾವು ಇಬ್ಬರೇ ಇದ್ದೇವು. ಅದಾದ ಬಳಿಕ ವಿಧಾನಸಭೆಯಲ್ಲಿ ನಾನು ಒಬ್ಬನೇ ಇದ್ದೆ. ಆಗ ನಾನು ಎಂದಿಗೂ ವಾಪಸ್‌ ಹಿಂದಿರುಗಿ ನೋಡಲೇ ಇಲ್ಲ. ಜನರಿಗಾಗಿ ಹೋರಾಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಗರ್‌ ಹುಕುಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಸಿಗದಿದ್ದಾಗ ನಾನು ಧರಣಿಯನ್ನು ಕುಳಿತೆ. ಆಗ ಸಿಎಂ ಆಗಿದ್ದ ಎಸ್‌ಎಂ ಕೃಷ್ಣ ಅವರು ಆ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಿದರು ಎಂದು ಅವರನ್ನು ಬಿಎಸ್‌ವೈ ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com