ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ?: ಕಾಂಗ್ರೆಸ್ ಟೀಕೆ
ಬೆಂಗಳೂರು: ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ ಎಂದು ಇಂಡಿಗೋ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟೀಕೆ ಬುಧವಾರ ಟೀಕೆ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಕೀಟೆ ಮಾಡಿರುವ ರಾಜ್ಯ ಕಾಂಗ್ರೆಸ್, ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ ತೇಜಸ್ವಿ ಸೂರ್ಯ ನಿದರ್ಶನವಾಗಿದ್ದಾರೆ! ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ಮಕ್ಕಳ ಚೇಷ್ಟೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ? ದೋಸೆ ತಿನ್ನುವ ಚಪಲ ಹೆಚ್ಚಾಗಿ "ಎಮರ್ಜೆನ್ಸಿ ಎಕ್ಸಿಟ್" ಅಗಲು ಹೊರಟಿದ್ದೇ? ಎಂದು ಪ್ರಶ್ನಿಸಿದೆ.
ಸಂಸದ ತೇಜಸ್ವಿ ಸೂರ್ಯ ವಿಮಾನದ ಸುರಕ್ಷಾ ನಿಯಮಗಳ ವಿರುದ್ಧವಾಗಿ ತೂರಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿದ್ದ ಸಂಗತಿಯನ್ನು ಸರ್ಕಾರ ಮುಚ್ಚಿಟ್ಟಿದ್ದೇಕೆ? ಸಂಸದರ ಉದ್ದೇಶವೇನಿತ್ತು? ಯಾವ ಅನಾಹುತ ಸೃಷ್ಟಿಸುವ ಯೋಜನೆ ಇತ್ತು? ನಂತರ ಕ್ಷಮಾಪಣೆ ಕೋರಿ ಹಿಂದಿನ ಸೀಟಿಗೆ ವರ್ಗಾವಣೆಯಾಗಿದ್ದೇಕೆ?
ತುರ್ತು ನಿರ್ಗಮನದ ದ್ವಾರವನ್ನು ವಿಮಾನ ನಿಲ್ದಾಣದಲ್ಲಿ ಅಲ್ಲದೆ, ಟೇಕಾಫ್ ಆದ ನಂತರ ಈ "ಕಪಿಚೇಷ್ಟೆ" ನಡೆಸಿದ್ದಿದ್ದರೆ ಸಂಭವಿಸುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಿದ್ದರು ಪ್ರಧಾನಿ ಮೋದಿಯವರೇ? ಈ ಬಗ್ಗೆ ತನಿಖೆ ಮಾಡುತ್ತಿಲ್ಲವೇಕೆ? ತೇಜಸ್ವಿ ಸೂರ್ಯ ಸಂಸದನಾಗಿದ್ದು, ಮಕ್ಕಳ ಕೈಗೆ ಆಟಿಕೆ ಸಿಕ್ಕಂತಾಗಿದೆ!
ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದದ್ದು ಶಿಕ್ಷಾರ್ಹ ಅಪರಾಧ, ವಿಮಾನಯಾನ ಸಂಸ್ಥೆ ಈ ಪ್ರಕರಣ ಮುಚ್ಚು ಹಾಕಲು ಯತ್ನಿಸಿದ್ದೇಕೆ? ಬಿಜೆಪಿಗೊಂದು ಕಾನೂನು, ಇತರರಿಗೊಂದು ಕಾನೂನು ಇದೆಯೇ ಬಿಜೆಪಿ? ಎದೆ ಸೀಳಿದರೆ ನಾಲ್ಕಕ್ಷರ ಬರುವುದಿಲ್ಲ ಎನ್ನುವ ತೇಜಸ್ವಿ ಸೂರ್ಯ ಅವರಲ್ಲಿ ಈಗ ಬಾಯಿ ತೆರೆದರೆ ನಾಲ್ಕು ಮಾತೇ ಹೊರಡುತ್ತಿಲ್ಲವೇಕೆ?
ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು ಬಿಜೆಪಿ? ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ! ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು? ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ? ಎಂದು ಕುಟುಕಿದೆ.
ದೆಹಲಿ ಸಿಎಂ ಮನೆ ದಾಳಿಯಿಂದ ಹಿಡಿದು ವಿಮಾನದ ತುರ್ತು ಬಾಗಿಲು ತೆಗೆಯುವವರೆಗೂ ಸಂಸದ ತೇಜಸ್ವಿ ಸೂರ್ಯನ ಹಲವು ಅತಿರೇಕದ ಪ್ರಕರಣಗಳು ಕಂಡುಬಂದಿವೆ. ಮಾನ್ಯ ಲೋಕಸಭಾ ಸ್ಪೀಕರ್ ಅವರು, ತೇಜಸ್ವಿ ಸೂರ್ಯ ಅವರ ಮಾನಸಿಕ ಆರೋಗ್ಯದ ತಪಾಸಣೆ ನಡೆಸಲು ಅದೇಶಿಸಬೇಕು, ಮಾನಸಿಕ ಲೋಪವಿದ್ದಲ್ಲಿ ಸಂಸದ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ