ರಾಜ್ಯದಲ್ಲಿ ಬರಗಾಲ ಘೋಷಿಸಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ರೂ. ನೀಡಿ: ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರು ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಹೀಗಾಗಿ ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರು ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಹೀಗಾಗಿ ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ಪ್ರಾಸ್ತಾವಿಕ ಮಾತನಾಡಿದ ಅವರು, ರೈತರ ಆತ್ಮಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಹಲವೆಡೆ ಮಳೆಯ ಅಭಾವ ಉಂಟಾಗಿದೆ. ನಿಗದಿತ ಸಮಯಕ್ಕೂ ಮಳೆ ಬಂದಿಲ್ಲ. ಮಳೆ ಬಾರದ ಕಾರಣ ರೈತರು ಬಿತ್ತನೆ ಬೀಜಗಳನ್ನು ಹಾಕಿಲ್ಲ. ಜುಲೈ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿದೆ. ಆದರೆ, ಎಲ್ಲಾ ಕಡೆಯೂ ಮಳೆಯಾಗಿಲ್ಲ, ಸರಿಯಾದ ಸಮಯಕ್ಕೆ ಬಿತ್ತನೆ ಆಗದಿದ್ದಲ್ಲಿ ಬೆಳೆ ಅವಧಿಯ ಮೇಲೆ ಪರಿಣಾಮ ಬೀರಿ, ಬೆಳೆ ನಷ್ಟ ಹಾಗೂ ಕಡಿಮೆ ಇಳುವರಿ ಬರುತ್ತದೆ ಎಂದು ಹೇಳಿದರು.

ಬಹಳಷ್ಟು ಜನರು ಮೊದಲ ಸಾರಿ ಬಿತ್ತನೆ ಮಾಡಿದ್ದಾರೆ. ನಂತರ ಎರಡನೇ ಬಾರಿಗೂ ಬಿತ್ತನೆ ಮಾಡಿದ್ದಾರೆ. ಮೊಳಕೆ ಬಂದಿಲ್ಲ. ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, ಮಳೆ ಇಲ್ಲದೇ ಬರೀ 1 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ, ಸರ್ಕಾರ ಇದನ್ನು ಬರಗಾಲ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಇದೇ ರೀತಿ ಮುಂದುವರಿದರೆ ಕೃಷಿ ಉತ್ಪಾದನೆ ಕಡಿಮೆಯಾಗಲಿದೆ. ಇದರಿಂದ ರಾಜ್ಯದ ಆದಾಯಕ್ಕೂ ಧಕ್ಕೆಯಾಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ರೈತರ ಆತ್ಮಹತ್ಯೆ ವರದಿಯನ್ನು ಉಲ್ಲೇಖಿಸಿದ ಅವರು, ಪ್ರಸ್ತುತದ ಪರಿಸ್ಥಿತಿಯನ್ನು ಸರ್ಕಾರ ಬರ ಎಂದು ಪರಿಗಣಿಸಬೇಕು. ಕುಡಿಯುವ ನೀರಿಗಾಗಿ ಸರ್ಕಾರ ಸಿಇಒಗಳಿಗೆ ಕೊಟ್ಟ ಹಣ ಸಾಲುವುದಿಲ್ಲ. ಪ್ರತಿ ಕ್ಷೇತ್ರಗಳಿಗೂ ಒಂದೊಂದು ಕೋಟಿ ರೂಪಾಯಿ ಅನುದಾನವನ್ನು ಕೊಡಬೇಕು ಎಂದು ಆಗ್ರಹಿಸಿದರು.

ಬಳಿಕ ರೈತರ ಆತ್ಮಹತ್ಯೆ ವಿಚಾರ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆ ವಿರುದ್ಧ ಕಿಡಿಕಾರಿದರು.

ಹಿಂದಿನ ವರ್ಷ ರೈತರ ಸಾವು ಇಷ್ಟಾಯಿತು, ಅಷ್ಟಾಯ್ತು ಅನ್ನುವುದು ಸರಿಯಲ್ಲ. ಅಂಕಿ ಅಂಶಗಳ ಮೂಲಕ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವುದು ಸರೀನಾ? ನಿರ್ಲಕ್ಷ್ಯವಾಗಿ, ಬೇಜವಬ್ದಾರಿಯ ಹೇಳಿಕೆ ಸರಿಯಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com