ಪಕ್ಷದೊಳಗೆ ಶಾಸಕರ ಬೇಗುದಿ: ಆಗಸ್ಟ್ 2ರಂದು ಹೈಕಮಾಂಡ್ ಸಭೆ, ರಾಜ್ಯ ನಾಯಕರಿಗೆ ಬುಲಾವ್

ಕೈ ಶಾಸಕರ ಅಸಮಾಧಾನ ಪತ್ರದ ಬೆನ್ನಲ್ಲೇ ನಿನ್ನೆ ಬುಧವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರಿಗೆ ಒಗ್ಗಟ್ಟಿನ ಪಾಠವನ್ನು ಸಿಎಂ ಸಿದ್ದರಾಮಯ್ಯ ಮಾಡಿ ಹಲವು ಕಿವಿಮಾತುಗಳನ್ನು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೈ ಶಾಸಕರ ಅಸಮಾಧಾನ ಪತ್ರದ ಬೆನ್ನಲ್ಲೇ ನಿನ್ನೆ ಬುಧವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರಿಗೆ ಒಗ್ಗಟ್ಟಿನ ಪಾಠವನ್ನು ಸಿಎಂ ಸಿದ್ದರಾಮಯ್ಯ ಮಾಡಿ ಹಲವು ಕಿವಿಮಾತುಗಳನ್ನು ಹೇಳಿದ್ದಾರೆ.

ಆದರೆ ಇಷ್ಟಕ್ಕೇ ನಿಂತಿಲ್ಲ ಕಾಂಗ್ರೆಸ್ ನಲ್ಲಿ ಒಳಬೇಗುದಿ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನದ ಮಾತುಗಳನ್ನು ಆಡಿದ್ದರು. ಇವೆಲ್ಲ ಕಾಂಗ್ರೆಸ್ ನೊಳಗೆ ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ.

ಹೈಕಮಾಂಡ್ ಬುಲಾವ್: ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು ಅದು ಕೈತಪ್ಪಿ ಹೋಗದಂತೆ ಹೈಕಮಾಂಡ್ ಕೂಡ ಬಹಳ ಎಚ್ಚರಿಕೆ ವಹಿಸುತ್ತಿದೆ.ಅಲ್ಲದೆ ರಾಷ್ಟ್ರಮಟ್ಟದಲ್ಲಿ ಮೋದಿಯವರನ್ನು ಸೋಲಿಸಲು ಇತ್ತೀಚೆಗೆ ವಿಪಕ್ಷಗಳೆಲ್ಲಾ ಒಟ್ಟಾಗಿ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ಆಗಸ್ಟ್ 2ಕ್ಕೆ ಸಭೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರೇ ಮುನಿಸಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಸ್ಟ್ 2ರಂದು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು, ಸಚಿವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಗೆ ಆರಂಭದಲ್ಲೇ ಸ್ವಪಕ್ಷದ ನಾಯಕರಿಂದಲೇ ಮುಜುಗರ ಎದುರಾಗುತ್ತಿದ್ದು, ಈ ಎಲ್ಲಾ ಅಸಮಾಧಾನ ಹಾಗೂ ಶಾಸಕರು , ಸಚಿವರ ನಡುವಿನ ಸಮನ್ವಯ ಕೊರತೆ ಕುರಿತು ಹೈಕಮಾಂಡ್‌ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಭೆಗೆ ಬಿ ಕೆ ಹರಿಪ್ರಸಾದ್ ಅವರಿಗೂ ಆಹ್ವಾನ ನೀಡಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಭಾಗವಹಿಸಲಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ, ವರ್ಗಾವಣೆ ಶಿಫಾರಸುಗಳಿಗೆ ಸಚಿವರುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಸುಮಾರು 30 ಶಾಸಕರು ಸಹಿ ಹಾಕಿ ಪತ್ರ ಬರೆದಿದ್ದು ಅದು ಮಾಧ್ಯಮಗಳಿಗೆ ಲಭ್ಯವಾಗಿತ್ತು. ಇದು ಸರ್ಕಾರ ಮಟ್ಟದಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಗೆ ತೀವ್ರ ಮುಜುಗರ ಉಂಟುಮಾಡಿದ್ದು ಬಹಿರಂಗವಾಗಿ ಹೇಳಿಕೆ ನೀಡದಂತೆ ನಾಯಕರು ಶಾಸಕರಿಗೆ ಪಾಠ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com