ಮುಂಬರುವ ಅನ್ಯ ರಾಜ್ಯಗಳ ವಿಧಾನಸಭೆ ಚುನಾವಣೆ: ಕಾಂಗ್ರೆಸ್ 'ಕರ್ನಾಟಕ ಮಾಡೆಲ್' ಅನುಕರಣೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವನ್ನು ದಾಖಲಿಸಿದ ನಂತರ, ಕಾಂಗ್ರೆಸ್ ತಂತ್ರಜ್ಞರು ಮುಂಬರುವ ಅನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ-ರಾಹುಲ್ ಗಾಂಧಿ
ಮಲ್ಲಿಕಾರ್ಜುನ ಖರ್ಗೆ-ರಾಹುಲ್ ಗಾಂಧಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವನ್ನು ದಾಖಲಿಸಿದ ನಂತರ, ಕಾಂಗ್ರೆಸ್ ತಂತ್ರಜ್ಞರು ಮುಂಬರುವ ಅನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. 

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಂಬರುವ ಚುನಾವಣೆಗಳಲ್ಲಿ 'ಕರ್ನಾಟಕ ಮಾದರಿ'ಯನ್ನು ಪ್ರಯತ್ನಿಸಲು ಚುನಾವಣಾ ತಂತ್ರಜ್ಞರನ್ನು ನಿಯೋಜಿಸಲಾಗಿದ್ದು ಅವರಿಗೆ ಈಗಾಗಲೇ ಶುಲ್ಕವನ್ನು ನೀಡಲಾಗಿದೆ. ಈ ರಾಜ್ಯಗಳಲ್ಲಿನ ಫಲಿತಾಂಶಗಳು 2024 ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಬಹುದು ಎಂಬ ಮಾತುಗಳು ಬಹುತೇಕ ಕೇಳಿಬರುತ್ತಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ರಾಜಕೀಯ ಸಲಹೆಗಾರರಾಗಿ ನೇಮಕಗೊಂಡಿರುವ ಪ್ರಮುಖ ತಂತ್ರಜ್ಞ ಸುನೀಲ್ ಕಾನುಗೋಲು 2024ರ ವರೆಗೆ ಬೇರೆ ಬೇರೆ ರಾಜ್ಯಗಳ ಚುನಾವಣೆಗಳತ್ತ ಗಮನ ಹರಿಸುವ ಸಾಧ್ಯತೆ ಇದೆ. ಕಳೆದ ಒಂಬತ್ತು ತಿಂಗಳಿನಿಂದ ಕರ್ನಾಟಕ ಚುನಾವಣೆಯಲ್ಲೇ ಬ್ಯುಸಿಯಾಗಿದ್ದ ಅವರು ಮತ್ತೆ ದೇಶಾದ್ಯಂತ ಪ್ರವಾಸ ಆರಂಭಿಸಿದ್ದಾರೆ.

ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಿಂದ ಹಿಂದಿರುಗಿದ ತಕ್ಷಣ ಕಾಂಗ್ರೆಸ್ ಹೈಕಮಾಂಡ್ ಮುಂದೆ ಯೋಜನೆಯೊಂದನ್ನು ಸಿದ್ಧಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಅವರು ಅಮೆರಿಕದಲ್ಲಿ ತಮ್ಮ ಭಾಷಣವೊಂದರಲ್ಲಿ ಕರ್ನಾಟಕ ಚುನಾವಣೆಯನ್ನು ಪ್ರಸ್ತಾಪಿಸಿದರು. ದ್ವೇಷದ ರಾಜಕೀಯ, ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಜನರ ಮತ ಎಂದು ಹೇಳಿದ್ದಾರೆ. ಇತರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಅನುಸರಿಸಿದ ತಂತ್ರವನ್ನು ಇತರ ರಾಜ್ಯಗಳಲ್ಲಿಯೂ ಬಳಸಲಾಗುವುದು ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ.

ಇದರೊಂದಿಗೆ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ನಿಭಾಯಿಸಲು ಪಕ್ಷವು ಪ್ರಯತ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರಿ ಮತ್ತು ವೈಎಸ್ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ರೆಡ್ಡಿ ಅವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಮತ್ತು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದು, ತಮ್ಮ ಪಕ್ಷವು ದೇಶದ ಹಳೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಅವರು ನೀಡಿದ್ದಾರೆ. 

ಕರ್ನಾಟಕದಲ್ಲಿ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ತಂತ್ರಜ್ಞರು ಗಮನಹರಿಸುವ ಸಾಧ್ಯತೆಯಿಲ್ಲ, ಏಕೆಂದರೆ ಅವರ ಮುಖ್ಯ ಗುರಿ ಲೋಕಸಭೆ ಚುನಾವಣೆಯಾಗಿದೆ. 28 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 21 ಸ್ಥಾನ ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಈಗಾಗಲೇ ಹಿರಿಯ ನಾಯಕರ ಕುಟುಂಬದ ಸದಸ್ಯರ ಹೆಸರು ಚರ್ಚೆಯಾಗುತ್ತಿದೆ. 

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ (ಮೈಸೂರು), ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ (ಬೆಳಗಾವಿ), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ (ಬೆಂಗಳೂರು ದಕ್ಷಿಣ), ಮಾಜಿ ಸಚಿವ ಎಂ.ಎಸ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ (ಚಿಕ್ಕಬಳ್ಳಾಪುರ), ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ (ಬಾಗಲಕೋಟ), ಶಾಂತಿನಗರ ಶಾಸಕ ಎನ್‌ಎ ಹ್ಯಾರೀಸ್ ಅವರ ಪುತ್ರ ಮೊಹಮ್ಮದ್ ಹಾರಿಸ್ ನಲಪಾಡ್ (ಬೆಂಗಳೂರು ಸೆಂಟ್ರಲ್) ಮತ್ತು ಮಾಜಿ ಸಂಸದೆ ಮತ್ತು ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ (ಮಂಡ್ಯ) ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಬಹುದು ಎಂಬ ಮಾತುಗಳು ಹರಿದಾಡುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com