ಚಿಕ್ಕಮಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರವಾಗಿದ್ದು, ಲೋಕಸಭಾ ಚುನಾವಣೆ ಬಳಿಕ ಈ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಅವರು ಶನಿವಾರ ಹೇಳಿದರು.
ಕೇಂದ್ರಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದ ಗಾಯತ್ರಿಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೋಸ, ವಂಚನೆಯಿಂದ ಆಮಿಷ ಒಡ್ಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದನ್ನು ಜನರಿಗೆ ತಿಳಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಳ್ಳಿಗಳಿಗೆ ಮತ್ತು ನಗರಕ್ಕೆ ಹೋಗೋಣವೆಂದರು.
ರಾಜ್ಯ ಸರ್ಕಾರದ ಉಚಿತ ಕೊಡುಗೆಗಳ ಬ್ರಹ್ಮಾಸ್ತ್ರ ನಮ್ಮ ಕೈಯಲ್ಲಿದೆ. ಜನರಿಗೆ ದ್ರೋಹ ಬಗೆದಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸೋಣವೆಂದು ಕರೆ ನೀಡಿದರು.
ರಾಜ್ಯದಲ್ಲಿರುವುದು ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯ ಸರ್ಕಾರ ಕ್ಷಣಮಾತ್ರದಲ್ಲಿ ಉಳಿಯುವುದಿಲ್ಲವೆಂದು ತಿಳಿಸಿದರು.
ಒಬ್ಬ ಮುಖ್ಯಮಂತ್ರಿ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ಸಾಮಾನ್ಯ. ಆದರೆ, ಡಿಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ ಅವರನ್ನು ಬೇಟಿ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ನೆಪಮಾತ್ರಕ್ಕೆ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದ್ದಾರೆ. ಅಕ್ಕಿಗಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗುತ್ತಿದ್ದಾರೆಂದು ಟೀಕಿಸಿದರು.
ಘೋಷಣೆ ಮಾಡುವುದು ಸುಲಭ ಅದನ್ನು ಜಾರಿಗೊಳಿಸುವುದು ಕಷ್ಟ ಎಂಬುದು ರಾಜ್ಯ ಸರ್ಕಾರಕ್ಕೆ ಈಗ ಮನವರಿಕೆಯಾಗಿದೆ. ಗ್ಯಾರಂಟಿಕಾರ್ಡ್ ಹಿಡಿದು ಮನೆಬಾಗಿಲಿಗೆ ತೆರಳಿ ಜನರನ್ನು ಕಾಂಗ್ರೆಸ್ ಪಕ್ಷ ಮರುಳು ಮಾಡಿತು. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದರಿಂದ ಚುನಾವಣೆಯಲ್ಲಿ ಸೋಲಬೇಕಾಯಿತು. ಅದಕ್ಕೆ ಮುಖಂಡರು ದೃತಿಗೆಡಬೇಕಾಗಿಲ್ಲ, ಮುಂದೇನು ಮಾಡಬೇಕೆಂಬುದರ ಬಗ್ಗೆ ಚಿಂತನೆಮಾಡುವುದು ಒಳ್ಳೆಯದು ಎಂದರು.
ಉಚಿತ ಪ್ರಯಾಣಕ್ಕೆ ಅವಕಾಶಮಾಡಿಕೊಟ್ಟಿದ್ದರಿಂದ ಬಸ್ಸಿನ ಬಾಗಿಲು ಮುರಿದುಹೋಗಿದೆ. ಮುಂದಿನ ದಿನಗಳಲ್ಲಿ ಬಸ್ಸಿನ ಟೈರ್ ಮಾತ್ರ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಆಹಾರ ಸಚಿವ ಮುನಿಯಪ್ಪ ಕೇಂದ್ರಸರ್ಕಾರ 5 ಕೆ.ಜಿ.ಅಕ್ಕಿಕೊಡುತ್ತಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈಗ ರಾಜ್ಯದ ಜನರಿಗೆ 5 ಕೆ.ಜಿ.ಅಕ್ಕಿಕೊಡುತ್ತಿರುವುದು ಕೇಂದ್ರಸರ್ಕಾರ ಎಂಬುದು ಮನವರಿಕೆಯಾಗಿದೆ. ಸಚಿವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆಂದರು.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿಹಾಕುವುದಕ್ಕೆ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಸರ್ವರ್ ಎಂದರೇನು ? ಹ್ಯಾಕ್ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ, ಗೊತ್ತಿರುವುದೊಂದೇ ಅಮವಾಸ್ಯೆಯಲ್ಲಿ ಮಸಣದಲ್ಲಿ ಕುಳಿತು ಊಟ ಮಾಡೋದು ಎಂದು ಟೀಕಿಸಿದರು.
Advertisement