'1 ಗ್ರಾಮ ಪಂಚಾಯ್ತಿ ಗೆಲ್ಲಲಾಗದವರು ಬಿಜೆಪಿ ಕುಣಿಸುತ್ತಿದ್ದಾರೆ! ಬಿಜೆಪಿಯ ಅರ್ಥಶಾಸ್ತ್ರದ ಬೃಹಸ್ಪತಿಗಳು ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆ'

ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ, ರೇಣುಕಾಚಾರ್ಯ ಅವರು ಹೇಳಿದ ಗ್ರಾ.ಪಂ ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು?
ರೇಣುಕಾಚಾರ್ಯ ಮತ್ತು ನಳಿನ್ ಕುಮಾರ್ ಕಟೀಲ್
ರೇಣುಕಾಚಾರ್ಯ ಮತ್ತು ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ, ರೇಣುಕಾಚಾರ್ಯ ಅವರು ಹೇಳಿದ ಗ್ರಾ.ಪಂ ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ದಮ್ಮು ತಾಕತ್ತಿದ್ದರೆ ಬಿಜೆಪಿ ಆ ದೊಣ್ಣೆನಾಯಕನ ಹೆಸರು ಹೇಳಲಿ! ಬಿಜೆಪಿ ಈಗ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೋ ಆತ್ಮಹತ್ಯೆ ವಿಮರ್ಶೆ ಮಾಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ! ಎಂದು ಲೇವಡಿ ಮಾಡಿದೆ.

“ಮಾರಿ“ ಎಂದರೆ ಏನರ್ಥ ಬಿಜೆಪಿ ಕರ್ನಾಟಕ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಮಹಿಳೆಯರನ್ನು ಘನತೆ, ಗೌರವದ ದೃಷ್ಟಿಯಲ್ಲಿ ನೋಡಲು ಬಿಜೆಪಿಗೆ ಸಾಧ್ಯವಿಲ್ಲವೇಕೆ? ಮಹಿಳೆಯರನ್ನು “ಮಾರಿ” ಎನ್ನುವ ಮೂಲಕ ಬಿಜೆಪಿ ತನ್ನೊಳಗಿನ ವಿಷಕಾರಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಸ್ತ್ರೀಯರ ಗೌರವಕ್ಕೆ ಚ್ಯುತಿ ತಂದ ಬಿಜೆಪಿ ನಾಡಿನ ಸಮಸ್ತ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ಬಿಜೆಪಿಯ ಸೋಲಿನ ಆತ್ಮಾವಲೋಕನದ ಫೈನಲ್ ರಿಸಲ್ಟ್ ಬರಲೇ ಇಲ್ಲ! ಒಬ್ಬೊಬ್ಬರದ್ದೂ  ಒಂದೊಂದು ಅವಲೋಕನ,

ಅಧ್ಯಕ್ಷರಿಂದ ಸೋಲಾಯ್ತು
ವಲಸಿಗರಿಂದ ಸೋಲಾಯ್ತು
ಅಡ್ಜಸ್ಟ್ಮೆಂಟ್ ನಿಂದ ಸೋಲಾಯ್ತು
ಬಡವರ ಅಕ್ಕಿ ಕಿತ್ತುಕೊಂಡು ಸೋಲಾಯ್ತು
ಮೋದಿ ಬೀದಿ ಸುತ್ತಿದ್ದಕ್ಕೆ ಸೋಲಾಯ್ತು
ಗುಜರಾತ್ ಮಾಡೆಲ್ ನಿಂದ ಸೋಲಾಯ್ತು
ಪಕ್ಷದ್ರೋಹಿಗಳಿಂದ ಸೋಲಾಯ್ತು

ಅಕಸ್ಮಾತ್ ಗೆಲುವಾಗಿದ್ದಿದ್ದರೆ ಕ್ರೆಡಿಟ್ ಸಿಂಪಲ್ ಆಗಿರುತ್ತಿದ್ದವು, ಮೋದಿಯಿಂದ ಗೆಲುವಾಯ್ತು, ಜೋಶಿ, ಸಂತೋಷರಿಂದ ಗೆಲುವಾಯ್ತು! ಅಂತೂ ಇಂತೂ ಬಿಜೆಪಿಯ ಆತ್ಮವಲೋಕನದಲ್ಲಿ ಹಲವು ಸತ್ಯಗಳು ಹೊರಬಂದಿವೆ, ಇನ್ನೂ ಹಲವು ಹೊರಬಾರದೆ ಒದ್ದಾಡುತ್ತಿವೆ!

ರಾಜ್ಯಧ್ಯಕ್ಷರಿಂದಲೇ ಬಿಜೆಪಿಗೆ ಸೋಲಾಗಿದ್ದು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಈ ಆರೋಪ ಕೇಳಿಯೂ ಸುಮ್ಮನಿರುವುದೇಕೆ? ನನ್ನದೇನೂ ತಪ್ಪಿಲ್ಲ, ಶಾಡೋ ಅಧ್ಯಕ್ಷರಾದ ಜೋಶಿ, ಸಂತೋಷ್ ಅವರೇ ಸೋಲಿಗೆ ಹೊಣೆ ಎಂದು ಘೋಷಿಸಿಬಿಡಲಿ! ಸೋಲಿಗೆ ಸರದಾರರಾದ ಜೋಶಿ, ಸಂತೋಷ್ ಅವರುಗಳ ಹೆಸರೆತ್ತಲು ಬಿಜೆಪಿಗರು ಭಯಪಾಡುತ್ತಿರುವುದೇಕೆ?ಎಂದಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಎಸ್ಎಸ್ ನವರ ಲಾಠಿ ಉಪಯೋಗಕ್ಕೆ ಬರಲಿದೆ, ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಕೊಟ್ಟರೆ ಬಡಿದಾಡಿಕೊಳ್ಳಲು ಬಳಸುತ್ತಾರೆ. ಆ ನಂತರ ಬದುಕುಳಿದವರಿಗೆ ಅಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು, ಆರ್ಎಸ್ಎಸ್ ನಾಯಕರಿಗೆ ಬಿಜೆಪಿಯ ಗೊಂದಲ ಬಗೆಹರಿಸಲು ಉತ್ತಮ ಐಡಿಯಾವನ್ನು ಕಾಂಗ್ರೆಸ್ ಕಡೆಯಿಂದ ಫ್ರಿಯಾಗಿ ನೀಡುತ್ತಿದ್ದೇವೆ! ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

ನಷ್ಟದ ಹಾದಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈಗ ಲಾಭದ ದಾರಿಗೆ ಮರಳಿವೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಗಣನಿಯವಾಗಿ ಹೆಚ್ಚಳವಾಗಿ ಸಾರಿಗೆ ಸಂಸ್ಥೆಗಳಿಗೆ ಆದಾಯ ಹರಿದುಬರುತ್ತಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ನಷ್ಟದ ಕೂಪಕ್ಕೆ ಜಾರಿದ್ದ ಸಾರಿಗೆ ಸಂಸ್ಥೆಗಳು ಈಗ ತಲೆ ಎತ್ತಿ ಬೀಗುತ್ತಿವೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮುಳುಗಿಯೇ ಬಿಡುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಅರ್ಥಶಾಸ್ತ್ರದ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ! ಎಂದು ಕಾಂಗ್ರೆಸ್ ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com