ವಿಧಾನಸೌಧದಲ್ಲಿ ಮದ್ಯದ ಬಾಟಲಿ ಸಾಗಣೆ ಪ್ರಕರಣ: ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಆಕ್ರೋಶ

ವಿಧಾನಸೌಧದಲ್ಲಿ ಮದ್ಯದ ಬಾಟಲಿ ಸಾಗಣೆ ಪ್ರಕರಣ ಪತ್ತೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ವಿಧಾನಸೌಧದಲ್ಲಿ ಮದ್ಯದ ಬಾಟಲಿ ಸಾಗಣೆ ಪ್ರಕರಣ ಪತ್ತೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ವಿಧಾನ ಸೌಧಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಆರು ಕೋಟಿಗಿಂತಲೂ ಹೆಚ್ಚು ಕನ್ನಡಿಗರನ್ನು ಪ್ರತಿನಿಧಿಸುವ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಜನ ಸೇವೆ ಮಾಡುವ ಪವಿತ್ರ ತಾಣ. ಇಂತಹ ವಿಧಾನಸೌಧದಲ್ಲಿ ಮದ್ಯದ ಬಾಟಲ್ ಸಾಗಣೆ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಬಿಗಿ ಭದ್ರತೆ ಭೇದಿಸಿ ವ್ಯಕ್ತಿಯೊಬ್ಬ ಬಾಟಲಿ ಸಮೇತ ಒಳಗೆ ಹೋಗುವಾಗ, ಕೈಯಿಂದ ಅದು ಜಾರಿ ಬಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಕಮಿಷನ್ ‌ದಂಧೆ, ಭ್ರಷ್ಟಾಚಾರದ ಕೊಚ್ಚೆಯಲ್ಲಿ ಬಿದ್ದಿರುವ ರಾಜ್ಯ ಬಿಜೆಪಿ ಸರ್ಕಾರದ ‌ಆಡಳಿತದಲ್ಲಿ ಇದೊಂದು ಬಾಕಿ ಇತ್ತು! ಎಂತಹ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ. 

ಅಂತಹ ಕಟ್ಟುನಿಟ್ಟಿನ ಭದ್ರತೆಯಲ್ಲಿ ಲೋಪವಾಗಿದ್ದು ಹೇಗೆ? ಪೊಲೀಸರು ಯಾವ ಪುರುಷಾರ್ಥಕ್ಕೆ ಭದ್ರತೆ ಒದಗಿಸುತ್ತಾರೆ? ವಿಧಾನ ಸೌಧದ ಆವರಣದಲ್ಲಿ ಹಣ ಸಾಗಿಸಿದ್ದು ಹಿಂದೆ ನಡೆದಿತ್ರು.‌ ಈಗ ಮದ್ಯ ಸಾಗಿಸುವ ಪ್ರಕರಣ ದೇಶದ ಮುಂದೆ ರಾಜ್ಯದ ಮಾನ ಹರಾಜು ಹಾಕುತ್ತದೆ. ಮದ್ಯ ತಂದ ವ್ಯಕ್ತಿ ಯಾರು?ಎಂದು ಪ್ರಶ್ನಿಸಿದ್ದು,  ಆವರಣದಲ್ಲಿನ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯದ ಆಡಳಿತ ಸೌಧದಲ್ಲಿನ‌ ಭದ್ರತೆಯ ಮಟ್ಟ ಇದಾಗಿದೆ! ಮಾನಗೇಡಿ ಸರ್ಕಾರ, ಸತ್ತುಹೋಗಿರುವ ಗೃಹ ಇಲಾಖೆ, ಲಂಗು-ಲಗಾಮಿಲ್ಲದ ಸಚಿವರು, ಕಳಪೆ ಆಡಳಿತ ಎಲ್ಲವೂ ಸೇರಿದರೆ ಇಂತಹ ಪ್ರಕರಣಗಳು ನಡೆಯುತ್ತವೆ ಎಂದು ಟೀಕಿಸಿದೆ. 

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಆತ ಯಾರಿಗಾಗಿ ಮದ್ಯದ ಬಾಟಲು ತೆಗೆದುಕೊಂಡು ಹೋಗುತ್ತಿದ್ದ? ಇದಕ್ಕೆಲ್ಲ ಕಡಿವಾಣ ಹಾಕದಿದ್ರೆ ಕೆಟ್ಟ ಸಂಪ್ರದಾಯಕ್ಕೆ ಬುನಾದಿ ಹಾಕಿದ ಹಾಗೆ. ಕೊನೆಯ ದಿನಗಳಲ್ಲಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com