ಬಿಜೆಪಿ ಸಾಮರ್ಥ್ಯದಿಂದ ನಾಯಕತ್ವ ನಿರ್ಧರಿಸಿದರೆ, ಕಾಂಗ್ರೆಸ್‌, ಜೆಡಿಎಸ್‌ ಡಿಎನ್‌ಎ ಮೂಲಕ ನಿರ್ಧರಿಸುತ್ತದೆ: ಸಿಟಿ ರವಿ

ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಾಯಕತ್ವವನ್ನು ಡಿಎನ್‌ಎ ಮೂಲಕ ಆಯ್ಕೆ ಮಾಡಿದರೆ, ಬಿಜೆಪಿಯಲ್ಲಿ ನಾಯಕರ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮತ್ತೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ವಂಶಾಡಳಿತದ ಕುರಿತು ಮಾತನಾಡಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿಜಯಪುರ: ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಾಯಕತ್ವವನ್ನು ಡಿಎನ್‌ಎ ಮೂಲಕ ಆಯ್ಕೆ ಮಾಡಿದರೆ, ಬಿಜೆಪಿಯಲ್ಲಿ ನಾಯಕರ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮತ್ತೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ವಂಶಾಡಳಿತದ ಕುರಿತು ಮಾತನಾಡಿದ್ದಾರೆ.

ಸೋಮವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಆಲಮಟ್ಟಿ ಅಣೆಕಟ್ಟಿನ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಸಿಟಿ ರವಿ ಅವರು ಮಾತನಾಡಿದರು,

ಬಿಜೆಪಿ ಪಕ್ಷವು ಜನ ಸಾಮಾನ್ಯರ ನೇತೃತ್ವದಿಂದ ಬೆಳೆದು ಬಂದಿದ್ದು, ನೀತಿಗೆ ಅಂಟಿಕೊಂಡಿದೆ. ರಾಜೀವ್ ಗಾಂಧಿ ಇದ್ದ ಸಂದರ್ಭದಲ್ಲಿ ಕಳ್ಳರೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಇದು ರಾಜೀವ್ ಗಾಂಧಿಯವರಿಗೂ ಗೊತ್ತಿತ್ತು. ನಮಗೆ ನಿಯತ್ತಿದೆ. ನಾವು ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮತಗಳನ್ನು ಕೇಳುತ್ತೇವೆ. ಪ್ರಣಾಳಿಕೆಯಲ್ಲಿ ಹೇಳದೇ ಇರುವಂತಹ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಅಲ್ಲದೇ ಅದರ ಕೆಲಸಗಳನ್ನು ಯಾರಿಗೂ ಹೇಳದೆ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಅವರ ಮಕ್ಕಳು, ಇವರ ಮಕ್ಕಳು ಎನ್ನುವ ಕಾರಣಕ್ಕೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ, ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದು ಅಡುಗೆ ಮನೆಯಲ್ಲಿ, ಕುಟುಂಬದೊಳಗೆ ನಿರ್ಧಾರವಾಗಲ್ಲ, ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಪಕ್ಷದ ವೇದಿಕೆಯಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಕೆರೆ ತುಂಬುವ ಯೋಜನೆಯನ್ನು ನಿಮ್ಮದೇ ಸರ್ಕಾರ ತಿರಸ್ಕಾರ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ  ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆಗೆ ಅನುಮತಿ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಕೆರೆ ತುಂಬುವ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನೀವೂ ಅದೇ ಯೋಜನೆಯ ಹೆಸರಿನಲ್ಲಿ ಫೋಟೋ ಹಾಕಿಕೊಳ್ಳುತ್ತೀರಿ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ವಾರೆಂಟ್ ಅವಧಿ ಮುಗಿದಿದೆ. ಇನ್ನು ವಾರೆಂಟಿ ಕಾರ್ಡ್ ನೀಡಿ ಏನು ಪ್ರಯೋಜನ? ಎಲ್ಲಾ ಕಡೆಯೂ ಕಾಂಗ್ರೆಸ್ ಪಕ್ಷ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಇಷ್ಟಕ್ಕೂ ನೀವು ಕೊಡುತ್ತಿರುವುದು ಫಾಲ್ಸ್ ಕಾರ್ಡ್ ಎಂಬುವುದು ಜನರಿಗೆ ಗೊತ್ತಿದೆ. ನೀವು ಅಧಿಕಾರದಲ್ಲಿ ಇದ್ದ ಸಂದರ್ಭ ಇದನ್ನು ಅನುಷ್ಠಾನಕ್ಕೆ ತಂದಿದ್ದರೆ ಅದೊಂದು ಮಾದರಿಯಾಗುತ್ತಿತ್ತು. ನೀವು ಈ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದರೆ ಅದು ಸತ್ಯದ ಮಾತಾಗುತ್ತಿತ್ತು. ಈ ಫಾಲ್ಸ್ ಕಾರ್ಡ್‌ಗೆ ಮೂರು ಕಾಸಿನ ಕಿಮ್ಮತ್ತು ಕೂಡಾ ಇಲ್ಲ. ಹಾಗಾಗಿ ಫಾಲ್ಸ್ ಕಾರ್ಡ್ ವಿರುದ್ಧ ನಾವು ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ಕೆಲಸ ಮಾಡಿರುವುದನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು 'ಫೈಟರ್ ರವಿ' ಸ್ವಾಗತಿಸಿದ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಈ ಬಗ್ಗೆ ನನಗೇನೂ ತಿಳಿದಿಲ್ಲ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ವಿಜಯ ಸಂಕಲ್ಪ ಯಾತ್ರೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಸಚಿವ ಗೋವಿಂದ ಕಾರಜೋಳ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ್, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com