ಮೇ 6 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ 36 ಕಿ.ಮೀ ಮೆಗಾ ರೋಡ್ ಶೋ, ವಾಹನ ಸವಾರರೇ ಜಾಗ್ರತೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 6 ರಂದು ಶನಿವಾರ ಬೆಂಗಳೂರಿನಲ್ಲಿ 'ನಮ್ಮ ಕರ್ನಾಟಕ ಯಾತ್ರೆ ಹೆಸರಿನಡಿ ಒಟ್ಟು 36.6 ಕಿ ಮೀ ದೂರ ಬೃಹತ್ ರೋಡ್ ಶೋ ನಡೆಸಲಿದ್ದಾರೆ.  
ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 6 ರಂದು ಶನಿವಾರ ಬೆಂಗಳೂರಿನಲ್ಲಿ 'ನಮ್ಮ ಕರ್ನಾಟಕ ಯಾತ್ರೆ ಹೆಸರಿನಡಿ ಒಟ್ಟು 36.6 ಕಿ. ಮೀ ದೂರ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್,  ಕರ್ನಾಟಕದ ಜನತೆ 9 ವರ್ಷಗಳಿಂದ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿ ಮೇ 6 ರಂದು ರಾಜಧಾನಿಯ 17 ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ  10. 1 ಕಿ.ಮೀ. ಸಂಜೆ 4ರಿಂದ ರಾತ್ರಿ 10ರವರೆಗೆ 26.5  ಕಿ. ಮೀ ದೂರ ರೋಡ್ ಶೋ ನಡೆಯಲಿದ್ದು,  ಹತ್ತು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೊದಲನೇ ರೋಡ್ ಶೋ ಬೆಳಗ್ಗೆ ಸುರಂಜನ್ ದಾಸ್ ರಸ್ತೆಯಿಂದ ಆರಂಭವಾಗುವ ಯಾತ್ರೆ ಮಹದೇವಪುರ, ಕೆ. ಆರ್. ಪುರ, ಸಿ.ವಿ. ರಾಮನ್ ನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ. ಎರಡನೇ ರೋಡ್ ಶೋ ಬೆಂಗಳೂರು ದಕ್ಷಿಣದಲ್ಲಿ ಸಂಜೆ 4 ರಿಂದ ರಾತ್ರಿ 10 ರವರೆಗೆ ನಡೆಯಲಿದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿ ನಗರ, ಮಹಾಲಕ್ಷ್ಮಿ ಲೇಔಟ್, ವಿಜಯ ನಗರ, ಗೋವಿಂದ ರಾಜ ನಗರ, ರಾಜಾಜಿ ನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ 26.5 ಕಿ.ಮೀ ರೋಡ್ ಶೋ ನಡೆಯಲಿದ್ದು, ರಾಜಾಜಿನಗರದ ಕೋಟೆ ಮಾರಮ್ಮ ದೇವಾಲಯದ ಬಳಿ ರೋಡ್ ಶೋ ಅಂತ್ಯವಾಗಲಿದೆ.  

ಅಧಿಕ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ಸಾರ್ವಜನಿಕರಿಗೆ ಯಾವುದೇ  ತೊಂದರೆಯಾಗದಂತೆ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ತೇಜಸ್ವಿ ಸೂರ್ಯ ಮಾತನಾಡಿ. ಪ್ರಧಾನಿ ಅವರು ನಮ್ಮ ಮನೆ ಬಾಗಿಲ ಹತ್ತಿರ ಬರುತ್ತಿರುವುದು ಇಡೀ ಬೆಂಗಳೂರಿಗರು ಖುಷಿ ಪಡುವ ಹಬ್ಬವಾಗಿದೆ. ನವ ಬೆಂಗಳೂರಿಗೆ ಪ್ರಧಾನಿ ಹಾಕಿರುವ ಅಡಿಪಾಯಕ್ಕಾಗಿ ಜನರು ಅವರನ್ನು ಹೂ ಮಳೆಯೊಂದಿಗೆ ಸ್ವಾಗತಿಸಲು ಕಾತರರಾಗಿದ್ದಾರೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com