ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಸುಟ್ಟುಹಾಕುತ್ತಿರುವ ಮಾಜಿ ಸಚಿವ ಈಶ್ವರಪ್ಪ.
ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಸುಟ್ಟುಹಾಕುತ್ತಿರುವ ಮಾಜಿ ಸಚಿವ ಈಶ್ವರಪ್ಪ.

ಕಾಂಗ್ರೆಸ್ ಪ್ರಣಾಳಿಕೆ ಪ್ರತಿ ಸುಟ್ಟು ಹಾಕಿದ ಈಶ್ವರಪ್ಪ: ಡಿಕೆಶಿ ಬಂಧನಕ್ಕೆ ಆಗ್ರಹ

ಬಜರಂಗ ದಳವನ್ನು ನಿಷೇಧ ಮಾಡುವ ಪ್ರಸ್ತಾವನೆ ಹೊಂದಿರುವ ಕಾಂಗ್ರೆಸ್‌ ಪ್ರಣಾಳಿಕೆಯು ರಾಷ್ಟ್ರ ದ್ರೋಹಿ ಪ್ರಣಾಳಿಕೆಯಾಗಿದ್ದು, ಕಾಂಗ್ರೆಸ್​​ ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ಆಗ್ರಹಿಸಿದ್ದಾರೆ.

ಕಲಬುರಗಿ: ಬಜರಂಗ ದಳವನ್ನು ನಿಷೇಧ ಮಾಡುವ ಪ್ರಸ್ತಾವನೆ ಹೊಂದಿರುವ ಕಾಂಗ್ರೆಸ್‌ ಪ್ರಣಾಳಿಕೆಯು ರಾಷ್ಟ್ರ ದ್ರೋಹಿ ಪ್ರಣಾಳಿಕೆಯಾಗಿದ್ದು, ಕಾಂಗ್ರೆಸ್​​ ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಆಗ್ರಹಿಸಿದ್ದಾರೆ.

ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಪ್ರತಿಯನ್ನು ಸುಟ್ಟು ಹಾಕಿದರು.

ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ, ಧರ್ಮದ ಬಗ್ಗೆ ಕಿಡಿ‌ಕಾರುತ್ತಿದೆ. ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣವಾಗುತ್ತಿದೆ. ಈ ರೀತಿ ವಿಷ ಬೀಜ ಬಿತ್ತುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ʻಬಜರಂಗ ದಳ ಅಂದರೆ ಆಂಜನೇಯ. ಆಂಜನೇಯನ ಬಾಲ ಮುಟ್ಟಿದ್ದಕ್ಕೆ ಲಂಕಾ ದಹನ ಆಯ್ತು. ಬಜರಂಗ ದಳ ಮುಟ್ಟಿದ್ದಕ್ಕೆ ಕಾಂಗ್ರೆಸ್‌ ಈ ಬಾರಿ ವಿಪಕ್ಷಕ್ಕೂ ಲಾಯಕ್ಕಿಲ್ಲದ ಸ್ಥಾನ ದೊರೆಯಲಿದೆ ಎಂದು ಕಿಡಿಕಾರಿದರು.

ಇದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲ. ಮೊಹಮ್ಮದ್‌ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಧರ್ಮವನ್ನು ರಕ್ಷಣೆ ಮಾಡುವ ಯುವಕರ ಪಡೆಯೇ ಬಜರಂಗ ದಳ. ಗೋ ಹತ್ಯೆ ತಡೆಯುತ್ತಿರುವ ಬಜರಂಗ ದಳವನ್ನು ನಿಷೇಧ ಮಾಡ್ತೀರಾ? ನಿಮ್ಮ ಪ್ರಣಾಳಿಕೆಯನ್ನು ಇಲ್ಲೇ ಸುಟ್ಟು ಹಾಕುತ್ತೇನೆಂದು ಬೆಂಕಿ ಹಚ್ಚಿದರು.

ಕಾಂಗ್ರೆಸ್‌ನವರು ಮಾನಸಿಕ ಸ್ಥಿತಿ ಹೇಗಾಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ನವರು ಹಿಂದು- ಮುಸ್ಲಿಂ ಚುನಾವಣೆ ಮಾಡಲು ಹೊರಟಿದ್ದಾರೆ. ನಾವೆಲ್ಲ ಮುಸ್ಲಿಮರು ಎಂದು ಕಾಂಗ್ರೆಸ್‌ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ನಿಮಗೆ ಬರೀ ಮುಸ್ಲಿಂ ಮತಗಳು ಮಾತ್ರ ಸಾಕಾ? ಹಿಂದೂಗಳ ಮತ ಬೇಡ್ವಾ ಎಂದು ಪ್ರಶ್ನಿಸಿದರು.

ಬಜರಂಗ ದಳದ ಬಗ್ಗೆ ಮಾತನಾಡಿದರೆ ಬಿಜೆಪಿಗೆ ಯಾಕೆ ಸಿಟ್ಟು ಎಂಬ ಡಿ.ಕೆ.ಶಿವಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಹಾಗೂ ಧರ್ಮವನ್ನು ಒಡೆಯುವ ಕೆಲಸ ಯಾರೇ ಮಾಡಿದರೂ ಅದಕ್ಕೆ ವಿರೋಧವಿದೆ ಎಂದರು.

ಕಾಂಗ್ರೆಸ್‌ ಪಿಎಫ್ಐ ಮೇಲಿನ‌ 120 ಪ್ರಕರಣಗಳನ್ನು ವಾಪಸ್ ಪಡೆದಿದೆ. ದೇಶ ದ್ರೋಹ ಚಟುವಟಿಕೆ ಮಾಡುವವರಿಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದು ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್‌ ಅವರು ಒಕ್ಕಲಿಗರು ನನ್ನ ಜತೆ ಬನ್ನಿ ನಾನು ಸಿಎಂ ಆಗುತ್ತೇನೆಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರು ಕುರುಬರೆಲ್ಲಾ ನನ್ನ ಜತೆ ಬನ್ನಿ. ನಾನೇ ಸಿಎಂ ಎನ್ನುತ್ತಾರೆ. ಅವರ ನಡುವೆಯೇ ಗೊಂದಲ ಇದೆ. ಇಂಥಹುದೇ ದ್ವಂದ್ವ ನಿಲುವಿನಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಕಣ್ಮರೆಯಾಗುತ್ತಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com