ಬೆಂಗಳೂರು: ರಾಮನಗರ ಜಿಲ್ಲೆಯಿಂದ ನಾಲ್ವರು ಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿ ನನಗೂ ಅವಕಾಶ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ರಾಮನಗರದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಡಿಕೆ.ಶಿವಕುಮಾರ್ ಅವರು ಪಕ್ಷದ ಅಭ್ಯರ್ಥಿ ಇಕ್ಬಾಲ್ ಹುಸೇನ್ ಪರ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಜಿಲ್ಲೆ ನಾಲ್ವರು ಸಿಎಂಗಳನ್ನು ಹುಟ್ಟು ಹಾಕಿದೆ... ದೊಡ್ಡ ನಾಯಕರು ನಿಮ್ಮ ಜಿಲ್ಲೆಗಾಗಿ ಸೇವೆ ಸಲ್ಲಿಸಿದಂತೆ ನನಗೂ ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.
ರಾಮನಗರದಲ್ಲಿ ಹನುಮಂತಯ್ಯನವರ ಹೊರತುಪಡಿಸಿದರೆ, ಎಚ್‌ಡಿ ದೇವೇಗೌಡ ಮತ್ತು ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ರಾಮಕೃಷ್ಣ ಹೆಗಡೆ 1983ರ ಉಪಚುನಾವಣೆಯಲ್ಲಿ ಕನಕಪುರದಿಂದ ಗೆದ್ದಿದ್ದರು.
‘ಕಳೆದ ಬಾರಿ ನನ್ನನ್ನು 79 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದೀರಿ, ಈ ಹಿಂದೆ ನನ್ನ ವಿರುದ್ಧ ಸ್ಪರ್ಧಿಸಿದ್ದ ಮುಖಂಡರಾದ ನಾರಾಯಣಗೌಡ, ವಿಶ್ವನಾಥ್, ಪಿಜಿಆರ್ ಸಿಂಧ್ಯಾ ಅವರು ಕನಕಪುರ ತಾಲ್ಲೂಕಿನ ಮಗ (ಶಿವಕುಮಾರ್) ಸಿಎಂ ಆಗಲು ಅರ್ಹರು ಎಂಬ ಭಾವನೆಯಿಂದ ಈಗ ನನ್ನೊಂದಿಗಿದ್ದಾರೆಂದು ಹೇಳಿದರು.
ಮೇ 15ಕ್ಕೆ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ: ಡಿಕೆಶಿ
ಮೇ 15 ರಂದು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, ಮೊದಲ ಸಚಿವ ಸಂಪುಟ ಸಭೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಸ್ಥಾನ ಕುರಿತು ಮಲ್ಲಿಕಾರ್ಜುನ ಖರ್ಗೆಯವರೇ ನಿರ್ಧರಿಸುತ್ತಾರೆಂದು ಊಹಾಪೋಹಗಳಿಗೆ ತೆರೆ ಎಳೆದರು.
ಬಿಜೆಪಿಯನ್ನು ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದಕ್ಕಾಗಿ ಚುನಾವಣಾ ಆಯೋಗ ನೀಡಿದ್ದ ನೋಟಿಸ್'ಗೆ ಉತ್ತರ ನೀಡಲಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರು. ಅವರ ಹೇಳಿಕೆ ಕುರಿತು ಇಸಿಐ ನೋಟಿಸ್ ಜಾರಿ ಮಾಡಲಿದೆಯೇ" ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.
ಅಧಿಕಾರದಲ್ಲಿರುವ ರಾಜ್ಯ ಸರ್ಕಾರವು ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸಲು ಸಾಧ್ಯವಾಗದ ಕಾರಣ ಮೋದಿಯವರು ಕರ್ನಾಟಕದಲ್ಲಿ ಪ್ರಚಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆಂದು ವ್ಯಂಗ್ಯವಾಡಿದರು.
ಈ ನಡುವೆ ಸರ್ಕಾರ ರಚನೆ ಕುರಿತು ಡಿಕೆ ಶಿವಕುಮಾರ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement