ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ: ಬಹುಮತ ಸಿಗದಿದ್ದರೆ ಪಕ್ಷ ವಿಸರ್ಜನೆ; ಎಚ್‌ಡಿಕೆಯತ್ತ ಎಲ್ಲರ ಚಿತ್ತ!

ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿತ್ತು. ಇಲ್ಲದಿದ್ದಲ್ಲಿ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚುನಾವಣೆಗೂ ಮುನ್ನ ಹೇಳಿದ್ದರು. 
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿತ್ತು. ಇಲ್ಲದಿದ್ದಲ್ಲಿ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚುನಾವಣೆಗೂ ಮುನ್ನ ಹೇಳಿದ್ದರು. ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಕಡೆಯಲ್ಲೂ ಪಕ್ಷ ಹೀನಾಯ ಸೋಲನ್ನು ಕಂಡಿದ್ದು, ಕೇವಲ 19 ಸ್ಥಾನಗಳನ್ನು ಗೆದ್ದಿದೆ. 2018ರಲ್ಲಿ 37 ಸ್ಥಾನಗಳಲ್ಲಿ ಜೆಡಿಎಸ್ ಜಯ ಸಾಧಿಸಿತ್ತು.

ಈ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ಆದರೆ, ಟ್ವೀಟ್ ಮಾಡಿರುವ ಅವರು, 'ನಮ್ಮ ಕುಟುಂಬಕ್ಕೆ ಸೋಲು ಹೊಸದಲ್ಲ; ಈ ಹಿಂದೆ ಎಚ್‌ಡಿ ದೇವೇಗೌಡ, ಎಚ್‌ಡಿ ರೇವಣ್ಣ ಮತ್ತು ನಾನು ಸೋಲನ್ನು ಕಂಡಿದ್ದೆವು ಮತ್ತು ನಮ್ಮೆಲ್ಲರ ಅವಿರತ ಪ್ರಯತ್ನಗಳು ಮತ್ತು ಹೋರಾಟಗಳು ಮುಂದುವರಿಯುತ್ತವೆ' ಎಂದಿದ್ದಾರೆ.

ಚುನಾವಣೆಗಳು ಘೋಷಣೆಗೂ ಮುನ್ನ ನಡೆದ ಪಕ್ಷದ ಪಂಚರತ್ನ ಯಾತ್ರೆಯು 103 ಕ್ಷೇತ್ರಗಳಲ್ಲಿ ಪ್ರಚಂಡ ಯಶಸ್ಸನ್ನು ಕಂಡಿತು. ಆದರೆ, 80ಕ್ಕೂ ಹೆಚ್ಚು ಸ್ಥಾನಗಳಾಗಿ ಅದು ಪರಿವರ್ತನೆಯಾಗುವಲ್ಲಿ ವಿಫಲಾಯಿತು.

ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವರ್ಗಾವಣೆಯಾಗಿದ್ದು, ಇದು 20 ಲಕ್ಷ ಮತದಾರರನ್ನು ಒಳಗೊಂಡಿದೆ ಎಂದು ಮತ ಹಂಚಿಕೆ ವಿಶ್ಲೇಷಣೆ ತೋರಿಸುತ್ತದೆ. ಜೆಡಿಎಸ್‌ನ ಮತಗಳಿಕೆಯು ಶೇ 5 ರಷ್ಟು ಕುಸಿದಿದೆ. ಕಳೆದ ಬಾರಿ ಶೇ 18 ರಷ್ಟಿದ್ದ ಮತಗಳಿಕೆಯು ಕೇವಲ ಶೇ 13.3ಕ್ಕೆ ಕುಸಿದಿದೆ.

1 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತಗಳಿರುವ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿರುವುದು ಜೆಡಿಎಸ್‌ಗೆ ದೊಡ್ಡ ಆಘಾತವಾಗಿದೆ. ಹೊಳೆನರಸೀಪುರದ ಪ್ರಬಲ ನಾಯಕ ಮಾಜಿ ಸಚಿವ ಎಚ್‌ಡಿ ರೇವಣ್ಣ ಕೂಡ ಅಲ್ಪ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಸೋತವರ ಪಟ್ಟಿ ದೊಡ್ಡದಾಗಿದ್ದು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಸಾ.ರಾ. ಮಹೇಶ್, ನಾಗಠಾಣ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರಂತಹ ದೊಡ್ಡ ನಾಯಕರು ಗೆಲುವು ಕಂಡಿಲ್ಲ.

1999ರಲ್ಲಿ ಜನತಾಪಕ್ಷವು ಜೆಡಿಎಸ್ ಮತ್ತು ಜೆಡಿಯು ಆಗಿ ವಿಭಜನೆಯಾದಾಗಿನಿಂದ ಪಕ್ಷವು ಅಷ್ಟಾಗಿ ಬೆಳವಣಿಗೆಯನ್ನು ಕಂಡೇ ಇಲ್ಲ. 2004ರಲ್ಲಿ ಜೆಡಿಎಸ್ 58 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, 2008ರಲ್ಲಿ ಭರವಸೆ ನೀಡಿದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿದ್ದಕ್ಕೆ ಮತದಾರರು ಕೋಪಗೊಂಡಾಗ 28ಕ್ಕೆ ಕುಸಿಯಿತು. 2013 ರಲ್ಲಿ 40 ಸ್ಥಾನಗಳೊಂದಿಗೆ ಪುಟಿದೇಳಿತು. 

ಜೆಡಿಎಸ್ ಪಕ್ಷವು ಸದ್ಯ ಅಪ್ರಸ್ತುತವಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದ್ದಾರೆ. ಜೆಡಿಎಸ್ ಸೋಲನ್ನು ಬಿಜೆಪಿ ಲಾಭ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆಗೆ, ವಿಚಾರವಾದಿ ಡಾ. ವಾಮನ್ ಆಚಾರ್ಯ, 'ಬಿಜೆಪಿ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com