ಅಂಬಲಿ ಹಳಸಿತು-ಕಂಬಳಿ ಬೀಸಿತಲೇ ಪರಾಕ್: ಸಿದ್ದುಗೆ ಸಿಎಂ ಸ್ಥಾನ; ನಿಜವಾದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ನುಡಿ

ಈ ವರ್ಷದ ಕಾರಣಿಕ ನುಡಿಯನ್ನು ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದು, 'ಸ್ವಾಮಿಯ ನುಡಿಯಲ್ಲಿ ಮಿಶ್ರಫಲ ಅಡಗಿದೆ. ಮಳೆ, ಬೆಳೆ ಸಮೃದ್ದಿಯಾಗಿ ನಾಡು ಸುಭಿಕ್ಷೆಯಾಗಬಹುದು. ಮಳೆ ಹೆಚ್ಚಾಗಿ ಬೆಳೆಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಮುಂದಿನ ಚುನಾವಣೆಯಲ್ಲಿ ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ಸೂಚನೆ ಇದೆ' ಎಂದಿದ್ದರು. 
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಆಯ್ಕೆ ಕಸರತ್ತಿಗೆ ತೆರೆ ಬಿದ್ದಿದ್ದು, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಡಿಕೆ ಶಿವಕುಮಾರ್‌ಗೆ ಡಿಸಿಎಂ ಸ್ಥಾನ ನೀಡಿದೆ. 

ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕ ಬಳಿಕ, ಇದೀಗ ಚುನಾವಣೆಗೂ ಮುನ್ನ ಭವಿಷ್ಯ ನುಡಿದಿದ್ದವರ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಫೆಬ್ರುವರಿಯಲ್ಲಿ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯವಾಣಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಅವರ ಭವಿಷ್ಯ ಬಹುತೇಕ ನಿಜವಾಗಿದೆ. 

'ಈ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ರಾಜಕೀಯ ಪಕ್ಷಗಳು ಪರಸ್ಪರ ಒಗ್ಗೂಡಿಕೊಂಡು ಚುನಾವಣೆಯನ್ನು (ಚುನಾವಣಾ ಮೈತ್ರಿ) ಎದುರಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಸಿಗಲಿದೆ. ಮತದಾರರು ಒಂದು ಪಕ್ಷಕ್ಕೆ ಸ್ಪಷ್ಟವಾದ ಅಧಿಕಾರ ಕೊಡುತ್ತಾರೆ. ಈ ಬಾರಿ ಸಮ್ಮಿಶ್ರ ಸರ್ಕಾರವಾಗುವುದಿಲ್ಲ' ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು.

ಇದಕ್ಕೆ ಪುಷ್ಠಿ ನೀಡುವಂತೆ, ಚುನಾವಣೋತ್ತರ ಸಮೀಕ್ಷೆಗಳಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದಿದ್ದವು. ಆದರೆ, ಒಂದೆರಡು ಸಮೀಕ್ಷೆಗಳು ಮಾತ್ರ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹೇಳಿದ್ದವು.

ನಿಜವಾದ ಮೈಲಾರಲಿಂಗೇಶ್ವರ ಕಾರ್ಣಿಕ 

ಐತಿಹಾಸಿಕ ಕಾರ್ಣಿಕದ ಗೊರವಪ್ಪ ರಾಮಣ್ಣ 11 ದಿನ ಉಪವಾಸ ವ್ರತಾಚರಣೆ ಮಾಡಿ, ಮಂಗಳವಾರ (ಫೆಬ್ರುವರಿ 8) ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿ, ಕಾರ್ಣಿಕದ ಸ್ಥಳಕ್ಕೆ ಆಗಮಿಸುತ್ತಾರೆ. ಬಳಿಕ 14 ಅಡಿ ಎತ್ತರದ ಬಿಲ್ಲನ್ನೇರಿ ಅಷ್ಟ ದಿಕ್ಕುಗಳನ್ನು ದಿಟ್ಟಿಸಿ ಸದ್ದಲೇ ಎಂದು ಕೂಗುತ್ತಾರೆ. ಈ ವೇಳೆ ನೆರೆದಿದ್ದ ಲಕ್ಷಾಂತರ ಭಕ್ತರು ಶಬ್ದರಾಗುತ್ತಾರೆ. ನಂತರ 'ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್' ಎಂದು ನುಡಿದು ಬಿಲ್ಲಿನಿಂದ ಕೆಳಗೆ ಬಿದ್ದರು.

ಈ ವರ್ಷದ ಕಾರಣಿಕ ನುಡಿಯನ್ನು ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದು, 'ಸ್ವಾಮಿಯ ನುಡಿಯಲ್ಲಿ ಮಿಶ್ರಫಲ ಅಡಗಿದೆ. ಮಳೆ, ಬೆಳೆ ಸಮೃದ್ದಿಯಾಗಿ ನಾಡು ಸುಭಿಕ್ಷೆಯಾಗಬಹುದು. ಮಳೆ ಹೆಚ್ಚಾಗಿ ಬೆಳೆಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಮುಂದಿನ ಚುನಾವಣೆಯಲ್ಲಿ ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ಸೂಚನೆ ಇದೆ' ಎಂದಿದ್ದರು. 

'ಒಂದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿಯು ರಾಜ್ಯವನ್ನಾಳುತ್ತಾನೆ' ಎಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿತ್ತು. ಅಂದಿನಿಂದಲೂ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕ ಕೂಡಲೇ, ಸಿದ್ದರಾಮಯ್ಯ ಅವರೇ ಸಿಎಂ ಎಂದು ಅನೇಕರು ನಿರ್ಧರಿಸಿದ್ದರು. ಅಂದು ಕಾರ್ಣಿಕ ನುಡಿದಂತೆಯೇ ಇಂದು ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. 

ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ರಾಜಕೀಯಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂಬುವುದಾಗಿ ಭಗವಂತ ದೈವವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದರು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗುತ್ತದೆ. ಪರೋಕ್ಷವಾಗಿ ಕುರುಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಿದ್ದಾರೆ ಎಂದೂ ವಿಶ್ಲೇಷಿಸಲಾಗಿದ್ದರಿಂದ ರಾಜಕೀಯ ವಲಯದಲ್ಲಿ ಕಾರ್ಣಿಕ ನುಡಿ ತೀವ್ರ ಕುತೂಹಲ ಹುಟ್ಟುಹಾಕಿತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com