
ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನವಾಯಿತು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ದೇವರ ಹೆಸರಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾಂಗ್ರೆಸ್ ಮಿತ್ರಕೂಟಗಳ ಒಗ್ಗಟ್ಟು ಪ್ರದರ್ಶನ
ಪದಗ್ರಹಣ ಸಮಾರಂಭಕ್ಕೆ ಯುಪಿಎ ಮಿತ್ರಕೂಟದ ಹಲವು ಪಕ್ಷಗಳ ನಾಯಕರು ಹಾಜರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ನಿಯೋಜಿತ ಸಿಎಂ ಸಿದ್ದರಾಮಯ್ಯ, ನಟ ಕಮಲ್ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದೇ ಬಸ್ನಲ್ಲಿ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಿಪಿಐನ ಡಿ ರಾಜಾ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಪಿಡಿಪಿಯ ಮೆಹಬೂಬಾ ಮುಫ್ತಿ, ಎನ್‌ಸಿಪಿಯಿಂದ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು , ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ ಮತ್ತು ನಟ- ರಾಜಕಾರಣಿ ಕಮಲ್ ಹಾಸನ್ ಅವರು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಸಾಂಕೇತಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಡಿಕೆಶಿಗೆ ತಂಜಾವೂರ್ ಪೈಂಟಿಂಗ್ ನೀಡಿ, ಶಾಲು ಹೊದಿಸಿದ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರಿಗೆ ತಂಜಾವೂರ್ ಪೈಂಟಿಂಗ್ ನೀಡಿ, ಶಾಲು ಹೊದಿಸಿದರು.
ದೀದಿ, ಕೇಜ್ರಿವಾಲ್, ಕೆಸಿಆರ್ ಗೈರು
ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಮೆಗಾ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.
Advertisement