ಮಾಜಿ ಸಿಎಂ ಬೊಮ್ಮಾಯಿ ಅಧಿಕಾರಾವಧಿಯಲ್ಲಿ ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ಅಕ್ರಮ: ಎಎಪಿ ಆರೋಪ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವದಿಯಲ್ಲಿ ಕಿದ್ವಾಯಿ ಆಸ್ಪತ್ರೆ ಹೆಸರಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಎಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ.
ಮಾಜಿ ಸಿಎಂ ಬೊಮ್ಮಾಯಿ.
Updated on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವದಿಯಲ್ಲಿ ಕಿದ್ವಾಯಿ ಆಸ್ಪತ್ರೆ ಹೆಸರಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಎಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮತಾನಾಡಿರುವ ಅವರು, ಬಿಜೆಪಿ ಮುಖಂಡರು ನೀತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಯಾವಾಗಲೂ ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ. ಕಿದ್ವಾಯಿ ಆಸ್ಪತ್ರೆ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಟೆಂಡರ್ ಕರೆಯದೆಯೇ ಹಲವು ಬಾರಿ ಆಸ್ಪತ್ರೆಗೆ ನೂರಾರು ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಾಗಿವೆ. ಮುಖ್ಯಮಂತ್ರಿ ಅಥವಾ ಆರೋಗ್ಯ ಸಚಿವರ ಕುಮ್ಮಕ್ಕು ಇಲ್ಲದೆ ಇದೆಲ್ಲ ಸಾಧ್ಯವಿಲ್ಲ” ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಸಾಕಷ್ಟು ಉಪಕರಣಗಳಿದ್ದರೂ ಪಿಪಿಪಿ ಮಾದರಿಯಲ್ಲಿ ಲ್ಯಾಬ್ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಸೇರಿ ಐಎಸ್ಒ ಸರ್ಟಿಫಿಕೇಟ್ ಮತ್ತು ಐಸಿಎಂಆರ್ ನಿಂದಲೂ ಪ್ರಮಾಣಪತ್ರ ಪಡೆಯಬೇಕು. ಅಲ್ಲದೆ, ಎನ್ಎಪಿಯಿಂದಲೂ ಪ್ರಮಾಣಪತ್ರ ಪಡೆದಿರಬೇಕು. ಆದರೆ, ಇದ್ಯಾವುದೂ ಇಲ್ಲದೆ ಬಿಎಂಎಸ್ (ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್) ಎಂಬ ಕಂಪನಿ ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಆಗಿ ನೋಂದಾಯಿಸಿಕೊಂಡು ಟೆಂಡರ್ ಪಡೆದಿದೆ” ಎಂದು ದೂರಿದರು.

ನವೆಂಬರ್ 06, 2019 ರಲ್ಲಿ ಆಸ್ಪತ್ರೆ ನಿರ್ದೇಶಕರಾಗಿದ್ದ ಡಾ. ರಾಮಚಂದ್ರ ಅವರು ಟೆಂಡರ್‌ಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಆದರೆ, ಟೆಂಡರ್ ಅಪ್ರೂವ್ ಮಾಡಲು ಅಗತ್ಯವಿರುವ 22 ದಿನಕ್ಕೂ ಮುಂಚಿತವಾಗಿಯೇ ಟೆಂಡರ್ ಅಕ್ಸೆಪ್ಟೆನ್ಸ್ ಲೆಟರ್ ಅನ್ನು ರಾಮಚಂದ್ರ ಅವರು ಬಿಎಂಎಸ್‌ಗೆ ನೀಡಿದ್ದಾರೆ. ಈ ರೀತಿ ಮಾಡಲು ಇವರ ಮೇಲೆ ಒತ್ತಡ ಹೇರಿದವರು ಯಾರು? ಈ ಸಂಬಂಧ ದೊಡ್ಡ ಮಟ್ಟದ ತನಿಖೆ ಅಗತ್ಯವಿದೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಐಸಿಎಂಆರ್ ಕೋವಿಡ್ ಪರೀಕ್ಷೆಗಾಗಿ ಕೆಲವು ಆಸ್ಪತ್ರೆಗಳನ್ನು ಆಯ್ಕೆ ಮಾಡಿತ್ತು. ಈ ಪೈಕಿ ಕಿದ್ವಾಯಿ ಆಸ್ಪತ್ರೆ ಕೂಡ ಒಂದು. ಐಸಿಎಂಆರ್ ಕಿದ್ವಾಯಿಗೆ ಒಪ್ಪಿಗೆ ನೀಡುವ ಒಂದು ತಿಂಗಳ ಮೊದಲೇ ಕಿದ್ವಾಯಿ ನಿರ್ದೇಶಕರು ಕೋವಿಡ್ ಪರೀಕ್ಷೆ ನಡೆಸಲು ಯಾವುದೇ ಅರ್ಹತಾ ಪ್ರಮಾಣ ಪತ್ರ ಇಲ್ಲದ ಬಿಎಂಎಸ್‌ಗೆ ಕೋವಿಡ್ ಪರೀಕ್ಷೆಗೆ ಅನುಮತಿ ನೀಡಿದ್ದಾರೆ ಎಂದರು.

ಕೋವಿಡ್ ಪರೀಕ್ಷೆಗಾಗಿ ಬಿಬಿಎಂಪಿಯವರು ಕಿದ್ವಾಯಿಗೆ ಹಂತ ಹಂತವಾಗಿ ರೂ.124 ಕೋಟಿ ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ, ಕಿದ್ವಾಯಿ ಆಸ್ಪತ್ರೆ ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ಬಿಎಂಎಸ್‌ಗೆ ಸಂಪೂರ್ಣ ರೂ.119 ಕೋಟಿ ವರ್ಗಾವಣೆ ಮಾಡಿದೆ. ಈ ಪೈಕಿ ರೂ.59 ಕೋಟಿ ಹಣ ಕಿದ್ವಾಯಿ ಆಸ್ಪತ್ರೆಗೆ ಬರಬೇಕಿತ್ತು. ಆದರೆ, ಕಿದ್ವಾಯಿಗೆ ಬರಬೇಕಿದ್ದ ಹಣ ಯಾರ ಜೇಬಿಗೆ ಸೇರಿದೆ” ಎಂದು ಪ್ರಶ್ನಿಸಿದರು.

ಕಿದ್ವಾಯಿಗೆ ಬರಬೇಕಿದ್ದ ಹಣ ಬಿಎಂಎಸ್ ಗೆ ವರ್ಗಾವಣೆಯಾಗಿರುವುದರ ಹಿಂದೆ ಯಾವ ಮುಖ್ಯಮಂತ್ರಿ ಮತ್ತು ಸಚಿವರ ಒತ್ತಡವಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲದೆ, ಕಿದ್ವಾಯಿಯಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ. ಜತೆಗೆ, ಹಲವು ಲ್ಯಾಬ್‌ಗಳಲ್ಲಿನ ಉಪಕರಣಗಳು ಕೆಲಸ ಮಾಡುತ್ತಿಲ್ಲ. ಅನುಮತಿ ಪಡೆಯದೆ ಅಂಗಾಂಗ ಕಸಿ ಮಾಡಲಾಗುತ್ತಿದೆ. ರೂ.21 ಕೋಟಿ ಮೌಲ್ಯದ ಉಪಕರಣಗಳನ್ನು ಟೆಂಡರ್ ಕರೆಯದೆ ಖರೀದಿಸಲಾಗಿದೆ. ಔಷಧಿ ಖರೀದಿಸಿರುವ 3,800 ಬಿಲ್ ಗಳಲ್ಲಿಯೂ ಭ್ರಷ್ಟಾಚಾರ ಪತ್ತೆಯಾಗಿದೆ. ಔಷಧಿ ಪೂರೈಸದೆಯೇ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆಯಲಾಗಿದೆ. ಆಡಿಟ್ ವರದಿಯಲ್ಲಿ ಇದು ಪತ್ತೆಯಾಗಿದ್ದು, ಈ ಬಗ್ಗೆಯೂ ತನಿಖೆಯಾಗಬೇಕು. ಇವೆಲ್ಲ ಹಗರಣಗಳ ಹಿಂದಿರುವುದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಹತ್ತಿರದ ಸಂಬಂಧಿ ಬಿಎಂಎಸ್ ಕಂಪನಿ ಮಾಲೀಕ ಸಿದ್ದಲಿಂಗಪ್ಪ ಫಲೋಚನ ರಕ್ಷಿತ್ ಆಗಿದ್ದಾರೆ” ಎಂದು ನಾಗಣ್ಣ ದೂರಿದರು.

“ಈ ಹಗರಣವನ್ನು ಸುಮ್ಮನೆ ಬಿಡುವುದಿಲ್ಲ, ಇದನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಎಲ್ಲ ಅವ್ಯವಹಾರಗಳ ಬಗ್ಗೆ ದಾಖಲೆ ಇದೆ. ಆಮ್ ಅದ್ಮಿ ಪಕ್ಷ ಈ ಭ್ರಷ್ಟಾಚಾರ ಹಗರಣದ ವಿರುದ್ಧ ಕಾನೂನು ಹೋರಾಟ ಮಾಡಲಿದೆ” ಎಂದು ಪಕ್ಷದ ಉಪಾಧ್ಯಕ್ಷ ಹಾಗೂ ವಕೀಲರಾದ ನಂಜಪ್ಪ ಕಾಳೇಗೌಡ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com