ಸಿಎಂ ಬದಲಾವಣೆ ವದಂತಿ ಕಾಟ: ಡಿಸಿಎಂ ಡಿ ಕೆ ಶಿವಕುಮಾರ್ ಇಂದು ದಿಢೀರ್ ದೆಹಲಿಗೆ ಪಯಣ!

ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆ ಬದಲಾವಣೆ ವಿಚಾರ ತೀವ್ರ ಸಂಚಲನ ಮೂಡಿಸಿ ನಂತರ ಸಚಿವರು, ಶಾಸಕರ ಸಭೆಯನ್ನು ಒಟ್ಟಾಗಿ ಕರೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಹುದ್ದೆ ಬಗ್ಗೆ ಯಾರೂ ಹೇಳಿಕೆ ನೀಡದಂತೆ ಎಲ್ಲರೂ ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆ ಮೇಲೆ ಗಮನ ಹರಿಸುವಂತೆ ತಾಕೀತು ಮಾಡಿದ್ದಾಯಿತು.
ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆ ಬದಲಾವಣೆ ವಿಚಾರ ತೀವ್ರ ಸಂಚಲನ ಮೂಡಿಸಿ ನಂತರ ಸಚಿವರು, ಶಾಸಕರ ಸಭೆಯನ್ನು ಒಟ್ಟಾಗಿ ಕರೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಹುದ್ದೆ ಬಗ್ಗೆ ಯಾರೂ ಹೇಳಿಕೆ ನೀಡದಂತೆ ಎಲ್ಲರೂ ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆ ಮೇಲೆ ಗಮನ ಹರಿಸುವಂತೆ ತಾಕೀತು ಮಾಡಿದ್ದಾಯಿತು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 5 ತಿಂಗಳು ಪೂರೈಸಿದೆ. ಆದರೆ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಅಧಿಕಾರಕ್ಕಾಗಿ ಪೈಪೋಟಿ ಇನ್ನೂ ನಿಂತಂತೆ ಕಾಣುತ್ತಿಲ್ಲ. ಸಿದ್ದು ಪರ ಶಾಸಕರು ಹಾಗೂ ನಾಯಕರು, ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಆಡಳಿತ ನಡೆಸಲಿದ್ದಾರೆ ಎಂದು ಹೇಳುತ್ತಿದ್ದರೆ, ಡಿಕೆಶಿ ಪರ ನಾಯಕರು ಮುಂದಿನ ಎರಡೂವರೆ ವರ್ಷ ಅವಧಿಗೆ ಡಿ.ಕೆ.ಶಿವಕುಮಾರ್‌ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. 

ಸಿಎಂ ಹುದ್ದೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಸಿಎಂ ಮತ್ತು ಡಿಸಿಎಂ ಇಬ್ಬರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಇಷ್ಟೆಲ್ಲಾ ರಾಜಕೀಯ ವಿದ್ಯಮಾನಗಳು ರಾಜ್ಯದಲ್ಲಿ ನಡೆದರೂ ಹೈಕಮಾಂಡ್ ಮಾತ್ರ ಇದುವರೆಗೆ ಮೌನ ವಹಿಸಿತ್ತು. ಈ ಮಧ್ಯೆ ಇಂದು ಸೋಮವಾರ ಡಿಸಿಎಂ ಡಿ ಕೆ ಶಿವಕುಮಾರ್ ದೆಹಲಿಯತ್ತ ಪಯಣ ಬೆಳೆಸುತ್ತಿದ್ದು  ಕುತೂಹಲ ಮೂಡಿದೆ.

ಡಿಕೆಶಿ ದಿಢೀರ್ ದೆಹಲಿಗೆ: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಇಂದು ದೆಹಲಿಯತ್ತ ಪಯಣ ಬೆಳೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಡಿ ಕೆ ಶಿವಕುಮಾರ್ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ಸಿಎಂ ಸಿದ್ದರಾಮಯ್ಯ ಸಹ ದೆಹಲಿಗೆ ಹೋಗಲಿದ್ದಾರೆ ಎಂಬ ವದಂತಿಯಿದೆ.

ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ಕೆಲ ಜಿಲ್ಲಾಧ್ಯಕ್ಷರ ಬದಲಾವಣೆ ಸೇರಿದಂತೆ ಇನ್ನಿತರ ವಿಚಾರದ ಬಗ್ಗೆ ಚರ್ಚಿಸಲು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

 ಡಿಕೆಶಿ-ಸತೀಶ್ ಜಾರಕಿಹೊಳಿ ಭೇಟಿ: ಇನ್ನು ಬೆಳಗಾವಿಯ ಹಲವು ಆಪ್ತ ಶಾಸಕರನ್ನು ಕರೆದುಕೊಂಡು ರಹಸ್ಯ ಸಭೆ ನಡೆಸಿ ಹಾಗೂ ತಮ್ಮ ರಾಜಕೀಯ ನಡೆ-ನುಡಿಗಳಿಂದ ಸುದ್ದಿಯಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ಬೆಳಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಮೊನ್ನೆ ನಡೆದ ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಅವರು 2028ಕ್ಕೆ ನಾನು ಕೂಡ ಸಿಎಂ ಹುದ್ದೆಗೆ ಬೇಡಿಕೆ ಇಡುತ್ತೇನೆ ಎಂದಿದ್ದರು. 

ಡಿಕೆಶಿ ಭೇಟಿ ಬಗ್ಗೆ ಜಾರಕಿಹೊಳಿ ಪ್ರತಿಕ್ರಿಯೆ: ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಸತೀಶ್ ಜಾರಕಿಹೊಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ವಿಚಾರ ಬಗ್ಗೆ ಚರ್ಚಿಸಿದ್ದಾರೆ. ಸಂಘಟನೆ, ಲೋಕಸಭಾ ಚುನಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಮಾತುಕತೆ ಮಾಡಿದ್ದು, ಬೆಳಗಾವಿ ವಿಚಾರದಲ್ಲಿ ಮಾತಾಡುವಂತಹದ್ದು ಏನಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com