ಶೀಘ್ರದಲ್ಲೇ ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ಆಯ್ಕೆ; ಮೂರನೇ ಶಕ್ತಿ ಕೇಂದ್ರ ಅಂತ ಯಾವುದು ಇಲ್ಲ: ಡಿಕೆ ಶಿವಕುಮಾರ್

ನಮ್ಮಲ್ಲಿ ಇರುವುದು ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೇ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ನಮ್ಮಲ್ಲಿ ಇರುವುದು ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೇ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಭೇಟಿ ಮಾಡಿ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನಾ ರಾಜ್ಯ ಸರ್ಕಾರದಲ್ಲಿ ಗೊಂದಲ ಮೂಡಿಸಬೇಕು ಎಂದು ಬಿಜೆಪಿಯ ಕೆಲಸವಿಲ್ಲದ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಒಬ್ಬನೆ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ನಮಗೆ ಬಹಳಷ್ಟು ಮಾಹಿತಿಗಳಿವೆ. ಸದ್ಯಕ್ಕೆ ನಾವು ಏನನ್ನು ಬಹಿರಂಗ ಪಡಿಸುವುದಿಲ್ಲ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನಾವೀಸ್ ನಡೆಸಿರುವ ಸಭೆಗೆ ರಾಜ್ಯದ ಕಾಂಗ್ರೆಸ್ ಶಾಸಕರು ಹೋಗಿಲ್ಲ. ಆದರೆ ಬಿಜೆಪಿಯವರು ಲೋಕಸಭೆ ಚುನಾವಣೆಗೂ ಮುನ್ನಾ ಗೊಂದಲ ಮಾಡಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಸಾಕಷ್ಟು ಗೊಂದಲ ಇದೆ, ನಾಯಕತ್ವ ಇನ್ನೂ ತೀರ್ಮಾನವಾಗಿಲ್ಲ. ಅದರ ನಡುವೆ ನಮ್ಮ ಶಾಸಕರ ಕುಶಲ ವಿಚಾರಿಸಲು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವಂತೆ ಬಂದು, ಹೊರ ಹೋಗುವಾಗ ರಾಜಕೀಯ ಮಾತನಾಡಿದ್ದಾಗಿ ಬಿಂಬಿಸುತ್ತಿದ್ದಾರೆಂದು ತಿಳಿಸಿದರು,

ಇಂತಹ ನೂರು ಪ್ರಯತ್ನ ಮಾಡಲಿ, ಮಾಡದಿರಲಿ, ನಮಗೆ ಎಲ್ಲಾ ಮಾಹಿತಿ ಗೊತ್ತಿದೆ. ಬಿಜೆಪಿಯ ಕೆಲವು ನಿರೋದ್ಯೋಗಿಗಳು, ಏಜೆಂಟರು ಓಡಾಡುತ್ತಿದ್ದಾರೆ. ಬಿಜೆಪಿಯವರು ಸಂಪರ್ಕ ಮಾಡಿ ಚರ್ಚೆ ಮಾಡಿದ ಬಳಿಕ ನಮ್ಮ ಶಾಸಕರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ನಿನ್ನೆ ದಿಡೀರ್ ಭೇಟಿ ನೀಡಿದ ಬಗ್ಗೆ ಪತಿಕ್ರಿಯಿಸಿ, ನಾನು ಮನೆಯ ಮುಖ್ಯಸ್ಥ, ಎಲ್ಲರ ಮನೆಗೂ ಹೋಗುತ್ತೇನೆ. ಕೆಲವರನ್ನು ನಮ್ಮ ಮನೆಗೆ ಕರೆಸಿಕೊಳ್ಳುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ. ರಾಮಲಿಂಗಾರೆಡ್ಡಿ ಮನೆಗೆ ಹೋಗಿದ್ದೇನೆ, ಪರಮೇಶ್ವರ್ ನಮ್ಮ ಮನೆಗೆ ಬರುತ್ತೇನೆ ಎಂದಿದ್ದರು ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಸತೀಶ್ ಜಾರಕಿಹೊಳಿ ನಮ್ಮ ಮನೆಗೆ ಬರುವುದಾಗಿ ಹೇಳಿದರು, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದೆ ಎಂದು ಹೇಳಿದರು.

 ನಮ್ಮ ಮನೆಯಲ್ಲಿ ಜಾಗವೇ ಇರುವುದಿಲ್ಲ. ಜನ ಒಬ್ಬರ ಮೇಲೆ ಒಬ್ಬರು ನುಗ್ಗುತ್ತಿರುತ್ತಾರೆ. ಮನೆಯಲ್ಲಿ ಸಮಯವೂ ಇರುವುದಿಲ್ಲ, ಜಾಗವೂ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಯವನ್ನೇ ನೀಡಲಾಗುತ್ತಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ತೇನೆಂದು ಹೇಳಿದರು.

ಕಾಂಗ್ರೆಸ್‍ನಲ್ಲಿಲ ಸತೀಶ್ ಜಾರಕಿಹೊಳಿ ಮೂರನೇ ಶಕ್ತಿ ಕೇಂದ್ರವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿ, ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೆ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ. ರಾಜ್ಯದ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ, ಅದು ಮುಗಿದ ಬಳಿಕ 2028ಕ್ಕೆ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ಇದೆಯಲ್ಲಾ ಅದೇ ಸಂತೋಷ ಎಂದರು.

ಪಂಚರಾಜ್ಯಗಳ ಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ಪುನಃರಚನೆಯಾಗಲಿದೆ ಎಂಬುದು ಆಧಾರ ರಹಿತ. ಸದ್ಯಕ್ಕೆ ಅಂತಹ ಯಾವ ಬದಲಾವಣೆಗಳು ಇಲ್ಲ. ನಿಗಮ ಮಂಡಳಿಗೆ ನೇಮಕಾತಿ ಕುರಿತು ಚರ್ಚೆ ನಡೆಸಲು ನವೆಂಬರ್ 15ರ ಬಳಿಕ ಎಐಸಿಸಿ ನಾಯಕರು ರಾಜ್ಯಕ್ಕೆ ಬರುತ್ತಾರೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸಚಿವರಾಗಿದ್ದಾರೆ. ಹೊಸ ತಂಡ ಬರಬೇಕು ಎಂದು ಹೈಕಮಾಂಡ್‍ನವರೊಂದಿಗೆ ಚರ್ಚೆ ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೆ ಇದ್ದಾರೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಮಂತ್ರಿಯವರು ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರಧಾನಿ ನಮ್ಮನ್ನು ಅಷ್ಟು ನೆನೆಸಿಕೊಳ್ಳುತ್ತಿದ್ದಾರಲ್ಲ ಸಂತೋಷ, ನಮ್ಮ ಗ್ಯಾರಂಟಿ, ರಾಜ್ಯದ ಜನರ ತೀರ್ಮಾನ ಪ್ರಧಾನಿಯವರ ನಿದ್ದೆ ಗೆಡಿಸಿದೆ ಎಂದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಐದರಲ್ಲೂ ಗೆಲ್ಲುತ್ತದೆ. ಮಿಜೋರಾಂನ ಬಗ್ಗೆ ಮಾಹಿತಿ ಇಲ್ಲ. ಉಳಿದಂತೆ ಎಲ್ಲಾ ಕಡೆ ಗೆಲ್ಲುತ್ತೇವೆ. ಉತ್ತರ ಭಾರತದಲ್ಲೆ ರಾಜಸ್ಥಾನದಲ್ಲಿ ಉತ್ತಮ ಅಭಿವೃದ್ಧಿಯ ಕೆಲಸಗಳಾಗಿವೆ ಎಂದರು.

ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುವ ಅಂತಹ ಪರಿಸ್ಥಿತಿ ಯಾಕೆ ಬಂತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಬೇಕು. ನಮಗೆ 136 ಶಾಸರಕ ಹಾಗೂ ಪಕ್ಷೇತರರ ಬೆಂಬಲ ಇದೆ. ಜೆಡಿಎಸ್‍ನವರು ಒಗ್ಗಟ್ಟು ಪ್ರದರ್ಶನ ಮಾಡುವ ಪರಿಸ್ಥಿತಿ ಬಂದಿರುವುದು ಏಕೆಂದು ಆ ಪಕ್ಷದ ನಾಯಕರೇ ಹೇಳಬೇಕು ಎಂದರು.

ಮುಖ್ಯಮಂತ್ರಿಯವರು ಹೇಳಿದಂತೆ ಬಿಜೆಪಿ-ಜೆಡಿಎಸ್‍ನ ಬಹಳಷ್ಟು ಮಂದಿ ಕಾಂಗ್ರೆಸ್‍ಗೆ ಬರುತ್ತಾರೆ. ಇದೇ 15ಕ್ಕೆ ಅಡ್ಮಿಷನ್ ದಿನಾಂಕ ನಿಗದಿಯಾಗಿದೆ ಎಂದು ಡಿ.ಕೆ.ಶಿವಕುಮಾರ ಜೇಬು ತಡಕಾಡಿದರು.

ಬಹುಶಃ ಮನೆಯಲ್ಲಿ ಅಪಾಯಿಂಟ್ ಮೆಂಟ್ ಕಾರ್ಡ್ ಅನ್ನು ಮನೆಯಲ್ಲಿ ಬಿಟ್ಟಿರಬಹುದು. ಎಷ್ಟು ಜನ ಅಡ್ಮಿಷನ್ ತೆಗೆದುಕೊಳ್ಳುತ್ತಾರೆ ಎಂದು 14ರ ಸಂಜೆ ತಿಳಿಸುತ್ತೇನೆ ಎನ್ನುವ ಮೂಲಕ ನವೆಂಬರ್ 15ರಂದು ಪ್ರಭಾವಿ ನಾಯಕರು ಕಾಂಗ್ರೆಸ್ ಸೇರುತ್ತಿರುವ ಸುಳಿವು ನೀಡಿದರು.

ಸದಾಶಿವ ಆಯೋಗದ ವರದಿ ಜಾರಿ ಸೇರಿದಂತೆ ಪರಿಶಿಷ್ಟರ ಬೇಡಿಕೆಗಳ ಈಡೇರಿಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಪಕ್ಷದಲ್ಲಿ ಕೆಲವು ಬದ್ಧತೆಗಳಿವೆ. ಚಿತ್ರದುರ್ಗದ ಸಮಾವೇಶದಲ್ಲಿ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಎಲ್ಲವನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡಿಸುತ್ತೇವೆ, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಬಿಬಿಎಂಪಿ ಇಂಜಿನಿಯರ್ ಇನ್ ಛೀಪ್ ಪ್ರಹ್ಲಾದ್ ಅವರ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿಲ್ಲ. ಬಜೆಟ್ ಘೋಷಿತ ಯೋಜನೆಗಳ ಪ್ರಕಾರ ಕೆಲಸ ನಡೆಯುತ್ತಿದೆ. ಹೊಸ ಬಜೆಟ್ ಕೊಟ್ಟಿಲ್ಲ, ಡಿಸೆಂಬರ್‍ಗೆ ವೇಳೆಗೆ ಹಣಕಾಸು ಹೊಂದಾಣಿಕೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು.

ರಾಜ್ಯದಲ್ಲಿ ಹೊಸ ಕಾರು ಖರೀದಿ ಸೇರಿದಂತೆ ಅನಗತ್ಯ ವೆಚ್ಚಗಳ ಬಗ್ಗೆ ಪ್ರತಿಕ್ರಿಯಿಸಿ, ಡಿಸೇಲ್ ಕಾರುಗಳನ್ನು ಬದಲಾವಣೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಇರುವ ನನ್ನ ಕಾರನ್ನು ಬದಲಾಯಿಸಬೇಕಿದೆ. ಇಲ್ಲಿ ಹೊಸ ಬುಕ್ಕಿಂಗ್‍ಗೆ ಅವಕಾಶ ಇಲ್ಲ. ಬೆಂಗಳೂರಿಗೆ ಹೋಗಿ ಕಾರು ಬುಕ್ ಮಾಡಿ ಬದಲಾವಣೆ ಮಾಡಬೇಕಿದೆ. ಡಿಸೇಲ್ ಕಾರು ದಲಾಯಿಸಿ ಪೆಟ್ರೋಲ್ ಕಾರು ಖರೀದಿಸಲು ಅಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಮೈಸೂರು ದಸರಾಗೆ ಜನವೋ ಜನ. ಜಂಬು ಸವಾರಿ ದಿನ ನಾನು ಮುಖ್ಯಮಂತ್ರಿಯವರ ಜೊತೆ ಬಸ್‍ನಲ್ಲಿ ಬಂದು ಬಿಟ್ಟೆ. ನನ್ನ ಪತ್ನಿ ಅವರ ಮನೆಯಲ್ಲಿದ್ದರು. ನನ್ನ ಮಾವನ ಮನೆಗೂ ಅರಮನೆಗೂ ಒಂದು ಕಿಲೋ ಮೀಟರ್. ನನ್ನ ಪತ್ನಿಯನ್ನು ಕರೆ ತರುವಂತೆ ಪೊಲೀಸ್ ಗಾಡಿ ಕಳುಹಿಸಿದೆ ಆದರೆ ಜನರ ನಡುವೆ ಕರೆ ತರಲಾಗಲಿಲ್ಲ, ನಾನು ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕು ಎಂದು ಕೊಂಡಿದ್ದೆ, ಅದು ಆಗಲಿಲ್ಲ ಅಷ್ಟು ಜನ. ಉಚಿತ ಪ್ರಯಾಣ ಎಂದು ಮಹಿಳೆಯರು ಮಾತ್ರ ಬರುತ್ತಿಲ್ಲ, ಜೊತೆಗೆ ಪತಿ, ಮಕ್ಕಳನ್ನು ಕರೆ ತರುತ್ತಾರೆ. ಪ್ರಯಾಣ ದರ 500 ರೂಪಾಯಿ ಉಳಿಸಿದರೆ ಊಟ, ವಸತಿ ಎಂದು ಒಂದುವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com