ಬೆಂಗಳೂರು: ಸತೀಶ್ ಜಾರಕಿಹೊಳಿ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಗೌಪ್ಯ ಸಭೆ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಲೋಕೋ ಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು, ಗೌಪ್ಯ ಸಭೆ ನಡೆಸಿದ್ದಾರೆ. 
ಸತೀಶ್ ಜಾರಕಿಹೊಳಿ, ಡಿಸಿಎಂ ಡಿಕೆ ಶಿವಕುಮಾರ್
ಸತೀಶ್ ಜಾರಕಿಹೊಳಿ, ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು, ಗೌಪ್ಯ ಸಭೆ ನಡೆಸಿದ್ದಾರೆ. ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ನಡೆದಿರುವ ಈ ಸಭೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ವಿಶೇಷವಾಗಿ ಕಾಂಗ್ರೆಸ್‌ನಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಸಭೆ ಮುಗಿದ ಕೂಡಲೇ ಶಿವಕುಮಾರ್ ನವದೆಹಲಿಗೆ ತೆರಳಿದ್ದಾರೆ. ಈ ಹಿಂದೆ ಜಾರಕಿಹೊಳಿ ತಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯಕ್ಕೆ ಸವಾಲು ಹಾಕಿ ಲಿಂಗಾಯತ ನಾಯಕಿಯಾಗಿ ಹೊರಹೊಮ್ಮುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಿವಕುಮಾರ್ ನೀಡಿದ ಪ್ರಾಮುಖ್ಯತೆ ಮತ್ತು ಬೆಂಬಲದಿಂದ ಪಿಡಬ್ಲ್ಯೂಡಿ ಸಚಿವರು ಅಸಮಾಧಾನಗೊಂಡಿದ್ದರು. 

ಇತ್ತೀಚೆಗೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದಾಗ ಅವರಿಗೆ ಸ್ವಾಗತ ಕೋರುವ ಕಾರ್ಯಕ್ರಮದಿಂದಲೂ ಸತೀಶ್ ಜಾರಕಿಹೊಳಿ ಹೊರಗುಳಿದಿದ್ದರು. ಅಲ್ಲದೇ, ಶಿವಕುಮಾರ್ ಅವರನ್ನು ಹೊರಗಿಟ್ಟು ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಡಿನ್ನರ್ ಮೀಟ್‌ನಲ್ಲಿ ಹಾಜರಾಗಿದ್ದರು. ಈ ಬೆಳವಣಿಗೆ ದೊಡ್ಡ ಸಂಚಲನ ಮೂಡಿಸಿತ್ತು. 2028ರಲ್ಲಿ ಸಿಎಂ ಸ್ಥಾನಕ್ಕೆ ನಾನು ಕೂಡಾ ಸ್ಪರ್ಧಿ ಎಂದು ಜಾರಕಿಹೊಳಿ ಹೇಳಿದ್ದರು. 

ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾರಕಿಹೊಳಿ, ಶಿವಕುಮಾರ್, ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಅದನ್ನು ಬಿಟ್ಟು ಬೇರೆ ವಿಷಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು. ಆದರೆ ಈ ಸಭೆಯ ಮೂಲಕ ಸಚಿವ ಜಾರಕಿಹೊಳಿ ಅವರೊಂದಿಗಿನ ಅಸಮಾಧಾನ ನಿವಾರಿಸಲು ಶಿವಕುಮಾರ್ ಬಯಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಲು ಶಿವಕುಮಾರ್ ನವದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com