ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ: ಸ್ವಪಕ್ಷದಿಂದ ಭುಗಿಲೆದ್ದ ಅಸಮಾಧಾನ, ಸಂಭ್ರಮದ ನಡುವಲ್ಲೇ ಶುರುವಾಯ್ತು ತಲೆನೋವು!

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿರುವುದು ಬಿ.ಎಸ್‌. ಯಡಿಯೂರಪ್ಪ ಪಾಳಯದಲ್ಲಿ ಹರ್ಷ ಮೂಡಿಸಿದ್ದರೆ, ಅವರ ವಿರೋಧಿಗಳು ಮತ್ತು ‘ಪ್ರಬಲ’ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದವರು ಮೆದು ಧ್ವನಿಯಲ್ಲಿ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿರುವುದು ಬಿ.ಎಸ್‌. ಯಡಿಯೂರಪ್ಪ ಪಾಳಯದಲ್ಲಿ ಹರ್ಷ ಮೂಡಿಸಿದ್ದರೆ, ಅವರ ವಿರೋಧಿಗಳು ಮತ್ತು ‘ಪ್ರಬಲ’ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದವರು ಮೆದು ಧ್ವನಿಯಲ್ಲಿ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ.

ದೀರ್ಘ ಕಾಲದಿಂದ ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡಿರುವವರು ಹಾಗೂ ಕಾಂಗ್ರೆಸ್‌, ಜೆಡಿಎಸ್‌ನಿಂದ ವಲಸೆ ಬಂದಿರುವವರು ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಸಂಭ್ರಮಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲೂ ಸಂಭ್ರಮ ಗೋಚರಿಸುತ್ತಿದೆ. ಆದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಲವು ನಾಯಕರದಲ್ಲಿ ಅಸಮಾಧಾನ ಸೃಷ್ಟಿಸಿದೆ.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ. ನರೇಂದ್ರ ಮೋದಿ ಕೂಡಾ ಓರ್ವ ಬಿಜೆಪಿಯಲ್ಲಿ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ” ಎಂದು ಹೇಳಿದ್ದಾರೆ.

”ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗಲ್ಲ. ಅವರು ಒಬ್ಬ ನಾಯಕ ಮಾತ್ರ, ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. “ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ಪಕ್ಷ ಎಲ್ಲಿದೆ? ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದು ಚೂರಾಗಿದೆ” ಎಂದು ಟೀಕಿಸಿದರು.

ಸಿಟಿ ರವಿ ಅವರು ಮಾತನಾಡಿ, ಪಕ್ಷ ನೇಮಕ ಮಾಡಿದೆ, ‘ಬದಲಾಗದೆ ಇರೋದು ಕಾರ್ಯಕರ್ತ ಅನ್ನೋದು. ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ ಅಷ್ಟೆ. 35 ವರ್ಷಗಳ ರಾಜಕೀಯದಲ್ಲಿ ಈಗಾಗಲೇ ಬಹಳ‌ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದ್ರು ಮಾತನಾಡಿದ್ರೆ ನಮ್ಮ ಮಾತೆ ನಮಗೆ ತಿರುಗುಬಾಣವಾಗುತ್ತದೆ. ಪಕ್ಷ ನೇಮಕ ಮಾಡಿದೆ.‌ ವೈಚಾರಿಕ ಸ್ಪಷ್ಟತೆಯ ಜೊತೆಗೆ ವಿಜಯೇಂದ್ರ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ. ಯಶಸ್ವಿಯಾಗಲಿ. ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗೆ ಜವಾಬ್ದಾರಿ ನಿರ್ವಹಿಸಿದ್ದೇನೆ’ ಎಂದು ತಿಳಿಸಿದರು.

ಪುತ್ರನ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ನೇಮಕ ಅನಿರೀಕ್ಷಿತವಾಗಿದ್ದು, ಯಾವುದೇ ಸ್ಥಾನಕ್ಕಾಗಿ ನಾನು ಒತ್ತಾಯ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧಾರ ತೆಗೆದುಕೊಂಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯ ನಮ್ಮೊಂದಿಗಿದ್ದು, ಅವರಲ್ಲಿ ಹೆಚ್ಚಿನವರು ಈಗ ನಮಗೆ ಬೆಂಬಲ ನೀಡಲಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಎಲ್ಲರೂ ಬಯಸುತ್ತಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ಇದೆ ಎಂದು ಹೇಳಿದರು.

ವಿಜಯೇಂದ್ರ ಅವರು ಮಾತನಾಡಿ, ರವಿ ಹಾಗೂ ಎಲ್ಲ ಹಿರಿಯರೊಂದಿಗೆ ಮಾತನಾಡಿ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.

ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಧ್ವಜವನ್ನು ಎತ್ತರಕ್ಕೆ ಏರಿಸಲು ಎಲ್ಲರೂ ಸಹಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಮೊದಲು ಸಮತೋಲನ ಸಾಧಿಸುತ್ತೇನೆ ಮತ್ತು ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ನಮ್ಮ ಪಕ್ಷವನ್ನು ತೊರೆಯಲು ಬಯಸುತ್ತಿರುವವರಿಗೆ ತಿಳಿಸಲು ಇಚ್ಛಿಸುತ್ತೇನೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com