ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಬಳಸಿಕೊಳ್ಳಲು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ: ಎಂ.ಬಿ ಪಾಟೀಲ್‌

ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲೆಂದೇ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲೆಂದೇ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ಎರಡು ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಬೆಂಕಿ ಹತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ವಿಜಯೇಂದ್ರ ನೇಮಕ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಇಷ್ಟಕ್ಕೂ ಇದು ವಿಜಯೇಂದ್ರ ಮೇಲಿನ ಪ್ರೀತಿಯಲ್ಲ. ಬದಲಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಚೆನ್ನಾಗಿ ಬಳಸಿಕೊಳ್ಳಬೇಕು ಎಂಬ ದೂರದೃಷ್ಟಿಯಿಂದ ನೇಮಕ ಮಾಡಿದ್ದಾರೆ. ಚುನಾವಣೆ ನಂತರ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ವಿಜಯೇಂದ್ರ ಹಠಾವೋ ನಡೆಯಲಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಮತಗಳು ಬಿಜೆಪಿ ಕೈಬಿಟ್ಟು, ಕೇವಲ ಹದಿನೇಳು ಲಿಂಗಾಯತ ಶಾಸಕರ ಸೀಟು ಪಡೆದುಕೊಳ್ಳುವಂತಾಗಿದೆ ಎಂಬುದು ಈಗ ಅವರ ಹೈಕಮಾಂಡ್‌ ಅರಿವಿಗೆ ಬಂದಿದೆ. ಈ ಕಾರಣದಿಂದ ಈಗ ಅನಿವಾರ್ಯವಾಗಿ ಯಡಿಯೂರಪ್ಪನವರನ್ನು ಲೋಕಸಭೆ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ವಿಜಯೇಂದ್ರ ನೇಮಕ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಮೋದಿ ಮತ್ತು ಅಮಿತ್‌ ಶಾ ಅವರದ್ದಿದೆ. ಈಗ ತಮ್ಮ ಬುಡಕ್ಕೆ ಬೆಂಕಿ ಹತ್ತಿರೋದರಿಂದ ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಳ್ಳಲು ವಿಜಯೇಂದ್ರರನ್ನು ಬಿಜೆಪಿ ರಾಜ್ಯಾದ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಮುಂದಿನ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮುಂದುವರಿಸಲ್ಲ. ಈ ನೇಮಕಾತಿ ಮೂರು ವರ್ಷಕ್ಕೆ ಮಾತ್ರ ಅಂತ ಮೊನ್ನೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೇ ಸ್ಟೇಟಮೆಂಟ್‌ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನ ಅಗತ್ಯವಿದ್ದಾಗ ಉಪಯೋಗಿಸಿಕೊಂಡು ಯಾವಾಗ ಬೇಕಾದರೆ ಕೈ ಬಿಡಬಹುದು ಎಂಬ ಏಕೈಕ ಉದ್ದೇಶಕ್ಕೆ ಈ ನೇಮಕ ಮಾಡಿದ್ದಾರೆ ಎಂದರು.

ಸದ್ಯ ಇದು ಯಾವುದೂ ವರ್ಕೌಟ್‌ ಆಗೋದಿಲ್ಲ. ಯಾವ ಲಿಂಗಾಯಿತರೂ ಇದಕ್ಕೆ ಬಲಿಯಾಗುವುದಿಲ್ಲ. ಇವತ್ತು ಲಿಂಗಾಯತರಿಗೂ ಎಲ್ಲಾ ಮಾಹಿತಿ ಗೊತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರರನ್ನು ಒಪ್ಪಿಕೊಳ್ಳುವುದು ಬಿಡುವುದು ಇದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಕೇವಲ ಲಿಂಗಾಯತರನ್ನು ಬಳಸಿಕೊಳ್ಳುವ ಉದ್ದೇಶ ಇಟ್ಟುಕೊಂಡು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದ್ದಾರೆ.

ಎರಡು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅದು ನಿಮಗೂ ಗೊತ್ತಿದೆ. ಮುಂದಿನ ಪಾರ್ಲಿಮೆಂಟ್‌ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಇಲ್ಲಿ ವಿಜಯೇಂದ್ರನವರಿಗಿಂತ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಈ ನೇಮಕ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com