ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ: ಬಿಜೆಪಿ

ಶಿವಮೊಗ್ಗದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭಗೆ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವೇ ಕಾರಣವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೇ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭಗೆ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವೇ ಕಾರಣವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೇ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ. ಡಾ.ಸಿಎನ್.ಅಶ್ವತ್ಥ್ ನಾರಾಯಣ್, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಪ್ರತ್ಯೇಕವಾಗಿ ಮಾತನಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಶಿವಮೊಗ್ಗ ಕೋಮು ಸೂಕ್ಷ್ಮ ನಗರವಾಗಿದ್ದು, ಮೆರವಣಿಗೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. “ಕಲ್ಲು ಎಸೆಯುವವರಿಗೆ ಮತ್ತು ತೊಂದರೆ ಕೊಡುವವರಿಗೆ ಪ್ರಸ್ತುತ ಸರ್ಕಾರದ ಕಾನೂನಿನ ಭಯವಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಘಟನೆಯನ್ನು ಚಿಕ್ಕದು ಎಂದು ಬಣ್ಣಿಸಿದ್ಜಾರೆ. ಆದರೆ ಮನೆಗಳಿಗೆ ಕಲ್ಲು ತೂರಲಾಗಿದೆ. ಕೋಲಾರದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಇಂತಹ ಅಂಶಗಳನ್ನು ಸರಕಾರ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಈ ಧೋರಣೆಯಿಂದಾಗಿ ರಾಜ್ಯದಲ್ಲಿ ಜೂಜುಕೋರರು, ಸಮಾಜಘಾತುಕರು, ಗಲಭೆಕೋರರು ಸ್ವತಂತ್ರರಾಗಿ ಓಡಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮೆರವಣಿಗೆ ವೇಳೆ ಹಿಂದೂಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಅಲ್ಪಸಂಖ್ಯಾತರ ಪರವಾಗಿ ನಾವಿದ್ದೇವೆಂದು ಕಾಂಗ್ರೆಸ್ ಬಹಿರಂಗವಾಗಿ ಹೇಳುತ್ತಿದೆ. ಹೀಗಾಗಿ ನಾವೂ ಕೂಡ ಹೇಳುತ್ತಿದ್ದೇವೆ. ನಾವೂ ಹಿಂದೂಗಳ ಪರವಾಗಿದ್ದೇವೆಂದು ಹೇಳಿದ್ದಾರೆ.

ಸಿಟಿ ರವಿ ಅವರು ಮಾತನಾಡಿ, ಇದೊಂದು ಪೂರ್ವಯೋಜಿಕ ಕೃತ್ಯವೆಂದು ಆರೋಪಿಸಿದ್ದಾರೆ. ಘಟನೆ ನಡೆದ ಶಿವಮೊಗ್ಗದ ರಾಗಿಗುಡ್ಡ ಪ್ರದೇಶ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇದು ಪೊಲೀಸರಿಗೂ ತಿಳಿದಿದೆ. ಹೀಗಿರುವಾಗ ಆ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಲು ಯಾವ ಕಾರಣಕ್ಕೆ ಅವಕಾಶ ನೀಡಿದರು? ಸರ್ಕಾರ ತಮ್ಮ ರಾಜಕೀಯ ಉದ್ದೇಶಕ್ಕೆ ಕೋಮುವಾದಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಮಾತನಾಡಿ, ಸಂಸ್ಕೃತಿ ಮತ್ತು ಧರ್ಮವನ್ನು ನಾಶಪಡಿಸುವ ಜನರನ್ನು ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ. ದುಷ್ಕರ್ಮಿಗಳು ಎಸ್ಪಿ ಮೇಲೆ ಕಲ್ಲು ಎಸೆದಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಮೌನ ತಾಳಿದೆ. ಇಂತಹ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಸರಕಾರ ಗೂಂಡಾ ಕಾಯಿದೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಆರ್.ಅಶೋಕ್ ಮಾತನಾಡಿ, ಇಂತಹ ಘಟನೆಗಳು ರಾಜ್ಯದ ಘನತೆಗೆ ಮಸಿ ಬಳಿಯುತ್ತದೆ ಎಂದಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿಯೂ ಟ್ವೀಟ್ ಮಾಡಿರುವ ಬಿಜೆಪಿ, ಶಿವಮೊಗ್ಗದಲ್ಲಿ ನಡೆದ ಗಲಭೆಯ ಹಿಂದೆ ಮತಾಂಧರ ಕೈವಾಡವಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತಾಂಧ ಶಕ್ತಿಗಳಿಗೆ ಬಲ ಬಂದಂತಾಗಿದೆ. ಶಿವಮೊಗ್ಗದಲ್ಲಿ ನಡೆದ ಗಲಭೆಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮತಾಂಧರು ಪೊಲೀಸರ ಮೇಲೆ ಹಲ್ಲೆ ಮಾಡುವಷ್ಟು ಮುಂದುವರೆದಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com