ಮುಂಬರುವ ಚುನಾವಣೆಗಳು: ಐಟಿ ದಾಳಿಯಿಂದ ರಾಜ್ಯ ರಾಜಕೀಯದಲ್ಲಿ ತಲ್ಲಣ; ತಂತ್ರಗಾರಿಕೆಗೆ ಕಾಂಗ್ರೆಸ್ ನಾಯಕರು ಮುಂದು!

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿಯಾಗಿದ್ದು ಈ ಸಂದರ್ಭದಲ್ಲಿ ಸಿಕ್ಕಿದ ಕೋಟ್ಯಂತರ ನಗದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಆಡಳಿತ ಪಕ್ಷ ವಿರುದ್ಧ ಪ್ರಮುಖ ಅಸ್ತ್ರವಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿಯಾಗಿದ್ದು ಈ ಸಂದರ್ಭದಲ್ಲಿ ಸಿಕ್ಕಿದ ಕೋಟ್ಯಂತರ ನಗದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಆಡಳಿತ ಪಕ್ಷ ವಿರುದ್ಧ ಪ್ರಮುಖ ಅಸ್ತ್ರವಾಗಿದೆ.

ಇದು ಆಡಳಿತ ಪಕ್ಷದ ನಾಯಕರಲ್ಲಿ ಸಂಚಲನ ಉಂಟುಮಾಡಿದ್ದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ, ಈ ವರ್ಷಾಂತ್ಯಕ್ಕೆ ಹಾಗೂ ಮುಂದಿನ ವರ್ಷ ಆರಂಭದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರದಂತೆ ಹೇಗೆ ನೋಡಿಕೊಳ್ಳುವುದು ಎಂದು ಮೂವರು ನಾಯಕರು ಚರ್ಚಿಸಿದ್ದಾರೆ. ಅಂತೂ ಐಟಿ ದಾಳಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಂತೂ ಸತ್ಯ.

ತುರ್ತಾಗಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿ ಚರ್ಚೆ, ಮಾತುಕತೆ ನಡೆಸಿರುವ ಬಗ್ಗೆ ಕೇಳಿದಾಗ, ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದೆವು. ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಅಲ್ಲಿನ ವಾಸ್ತವ ವರದಿ ಸಲ್ಲಿಸುವಂತೆ ನಾವು ಸಚಿವರುಗಳಿಗೆ ಕೆಲಸ ನೀಡಿದ್ದೇವೆ. ಈ ಪ್ರಕ್ರಿಯೆ ತಡವಾಗದೆ ಬೇಗನೆ ಮಾಡಿ ಮುಗಿಸುವಂತೆ ನಾವು ಸಚಿವರುಗಳಿಗೆ ಸೂಚಿಸಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು. 

ನಿಗಮ-ಮಂಡಳಿಗಳಿಗೆ ನೇಮಕಾತಿ ವಿಚಾರ ಕೂಡ ಪ್ರಸ್ತಾಪಿಸಲಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸುವುದಾಗಿ ಹೇಳಿದರು.

ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನಿರ್ವಹಿಸುವ ಕುರಿತು ಈ ಮೂವರು ನಾಯಕರು ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕತ್ವವು ಶಿವಕುಮಾರ್ ಅವರನ್ನು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಚುನಾವಣೆಗೆ ಮುನ್ನ ಪಕ್ಷದ ವರ್ಚಸ್ಸನ್ನು ಹಾಳು ಮಾಡುತ್ತಿದೆ ಎಂದು ಖರ್ಗೆ ಮತ್ತು ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆಡಳಿತಾರೂಢ ಪಕ್ಷಕ್ಕೆ 1,000 ಕೋಟಿ ಹಣ ಸಂಗ್ರಹಿಸುವ ಗುರಿಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ತೆಲಂಗಾಣಕ್ಕೆ 300 ಕೋಟಿ, ಮಿಜೋರಾಂಗೆ 100 ಕೋಟಿ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ತಲಾ 200 ಕೋಟಿ ಕಳುಹಿಸಲು ಪಕ್ಷ ಯೋಜಿಸಿತ್ತು ಆದರೆ ಹಣ ಹಂಚುವ ಮುನ್ನವೇ ಸಿಕ್ಕಿಬಿದ್ದಿದೆ ಎಂದು ಬಿಜೆಪಿ ಆರೋಪಿಸಿದೆ.

ಗುತ್ತಿಗೆದಾರ ಆರ್‌ ಅಂಬಿಕಾಪತಿ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಪತ್ತೆ ಮಾಡಿರುವ 42 ಕೋಟಿ ರೂಪಾಯಿ ಹಣವನ್ನು ತೆಲಂಗಾಣಕ್ಕೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. 

ಯಾರಿಗೆ ಉತ್ತರಿಸಬೇಕೋ ಅವರಿಗೆ ನಾನು ಉತ್ತರಿಸುತ್ತೇನೆ. ಅವರಿಗೆ ಐಟಿ ಇಲಾಖೆಯ ಕಾರ್ಯವಿಧಾನಗಳು ಗೊತ್ತಿಲ್ಲ, ಇಲಾಖೆಯ ಏಜೆಂಟರಂತೆ ಮಾತನಾಡುತ್ತಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಯಾಗಿ, ನಾನು ಅವರಿಗೆ ಉತ್ತರ ನೀಡಲು ಸಮಯವನ್ನು ನಿಗದಿಪಡಿಸುತ್ತೇನೆ ಎಂದು ಶಿವಕುಮಾರ್ ಅವರು ಐಟಿ ದಾಳಿಗೆ ಸಂಬಂಧಿಸಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನಾನು ಹೇಡಿಯಲ್ಲ, ಭಯದಿಂದ ಓಡಿಹೋಗುವುದಿಲ್ಲ. ಮಾಜಿ ಸಿಎಂಗಳ ನಕಲಿ ಸ್ವಾಮಿಗೆ ತಕ್ಕ ಉತ್ತರ ನೀಡುತ್ತೇನೆ,  ಅವರ ದುಷ್ಕೃತ್ಯಗಳನ್ನು ಬಯಲಿಗೆಳೆಯುತ್ತೇನೆ ಎಂದು ಡಿ ಕೆ ಶಿವಕುಮಾರ್ ಪ್ರತ್ಯುತ್ತರ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com