ಇಂದು ಜೆಡಿಎಸ್ ಮಹತ್ವದ ಕೋರ್ ಕಮಿಟಿ ಸಭೆ: ಸಿಎಂ ಇಬ್ರಾಹಿಂ ವಿರುದ್ಧ ಕ್ರಮ ಸಾಧ್ಯತೆ

ಇಂದು ಜೆಡಿಎಸ್ ಪಕ್ಷದ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಜೊತೆಗಿನ ಮೈತ್ರಿ ವಿರುದ್ಧ ಇತ್ತೀಚಿಗೆ ಸಭೆ ನಡೆಸುವ ಮೂಲಕ  ತಮ್ಮದೇ ನಿಜವಾದ ಜೆಡಿಎಸ್, ನಾನೇ ನಿಜವಾದ ಜೆಡಿಎಸ್ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. 
ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ

ಬೆಂಗಳೂರು: ಇಂದು ಜೆಡಿಎಸ್ ಪಕ್ಷದ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಜೊತೆಗಿನ ಮೈತ್ರಿ ವಿರುದ್ಧ ಇತ್ತೀಚಿಗೆ ಸಭೆ ನಡೆಸುವ ಮೂಲಕ  ತಮ್ಮದೇ ನಿಜವಾದ ಜೆಡಿಎಸ್, ನಾನೇ ನಿಜವಾದ ಜೆಡಿಎಸ್ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. 

ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸಭೆ ನಿಗದಿಯಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಪಕ್ಷದ 20 ಸದಸ್ಯರ ಕೋರ್ ಕಮಿಟಿ, 60 ಸದಸ್ಯರ ಪರಿಷತ್ತು, 19 ಶಾಸಕರು, ಮಾಜಿ ಶಾಸಕರು ಮತ್ತು ಮಾಜಿ ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿನ ನೈತಿಕ ಹೊಣೆ ಹೊತ್ತು ಇಬ್ರಾಹಿಂ ಅವರು ಮೇ 14 ರಂದು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪಕ್ಷದ ನಾಯಕತ್ವ ಈಗ ಅದನ್ನು ಒಪ್ಪಿಕೊಳ್ಳಬಹುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಬಿಜೆಪಿ ಜೊತೆಗಿನ ದೋಸ್ತಿ ವಿರುದ್ಧ ಸಿಡಿದೆದ್ದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಇತ್ತೀಚಿಗೆ ಬೆಂಗಳೂರಿನಲ್ಲಿ  ಸಭೆ ನಡೆಸಿದ್ದರು. ಪಕ್ಷ ವಿರೋಧಿ" ಚಟುವಟಿಕೆ  2024 ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಟೀಕಿಸುವ ಮೂಲಕ ಪಕ್ಷದ ನಾಯಕತ್ವವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕೆಲವು ಮುಖಂಡರು ಬಯಸಿದ್ದು, ಇಬ್ರಾಹಿಂ ಉಚ್ಛಾಟನೆ ಅಥವಾ ಪಕ್ಷದಿಂದ ಅಮಾನತು ಮಾಡಲು ಗೌಡರು ಮತ್ತು ಕುಮಾರಸ್ವಾಮಿ ಮುಂದಾಗುತ್ತಾರೆಯೇ ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಜೆಡಿಎಸ್ ನಾಯಕತ್ವದ ಕ್ರಮವನ್ನು ವಿರೋಧಿಸಿದ್ದ ಇಬ್ರಾಹಿಂ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಅದರ ಘಟಕಗಳು ಮೈತ್ರಿಗೆ ವಿರುದ್ಧವಾಗಿರುವುದರಿಂದ ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. ಇದು ಪಕ್ಷದ ನಾಯಕತ್ವವನ್ನು ಕೆರಳಿಸಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 16 ರಂದು ನಡೆದ ಸಭೆಯಲ್ಲಿ ಜೆಡಿಎಸ್ ಯಾವುದೇ “ಕುಟುಂಬದ ಆಸ್ತಿ” ಅಲ್ಲ ಎಂದು ಇಬ್ರಾಹಿಂ ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಮೂಲ ಜೆಡಿಎಸ್ ತನ್ನೊಂದಿಗೆ ಇದೆ ಮತ್ತು ಅದು I.N.D.I.A ಬಣವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಈ ಎಲ್ಲಾ ಬೆಳವಣಿಗೆಗಳು ಜೆಡಿಎಸ್ ನಾಯಕತ್ವವನ್ನು ಕೆರಳಿಸಿದೆ.

ಮತ್ತೊಂದೆಡೆ  ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎನ್ನುವ ಪತ್ರಿಕಾ ಪ್ರಕಟಣೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ  ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ವಜಾಗೊಳಿಸಿ ಹೆಚ್​ಡಿ ದೇವೇಗೌಡ ಅವರ ಪ್ರಕಟಣೆ ಪತ್ರವೊಂದು ವೈರಲ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ನಡೆಯುತ್ತಿರುವ ಜೆಡಿಎಸ್ ಕೋರ್ ಕಮಿಟಿ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com