ನಕಲಿ ವೋಟರ್ ಐಡಿ ತಯಾರಿಕೆ: ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ವಹಿಸಿ; ಎಸ್ ಸುರೇಶ್ ಕುಮಾರ್ ಒತ್ತಾಯ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಕಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ತಯಾರಿಕೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಬೇಕು ಎಂದು ಬಿಜೆಪಿ ಬುಧವಾರ ಒತ್ತಾಯಿಸಿದೆ.
ಎಸ್ ಸುರೇಶ್ ಕುಮಾರ್
ಎಸ್ ಸುರೇಶ್ ಕುಮಾರ್

ಬೆಂಗಳೂರು: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಕಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ತಯಾರಿಕೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಬೇಕು ಎಂದು ಬಿಜೆಪಿ ಬುಧವಾರ ಒತ್ತಾಯಿಸಿದೆ.

ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಸ್‌ಎಲ್ ಟೆಕ್ನೋ ಸೊಲ್ಯೂಷನ್ ಮಾಲೀಕ ಮೌನೇಶ್ ಕುಮಾರ್, ಆತನ ಸಹಚರರಾದ ಭಗತ್ ಮತ್ತು ರಾಘವೇಂದ್ರ ಎಂಬ ಮೂವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. 

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಉಲ್ಲೇಖಿಸಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

'ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಪರಾಧವು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸುವುದು ದೊಡ್ಡ ಅಪರಾಧವಾಗಿದೆ. ಈ ಎಲ್ಲಾ ಆರೋಪಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ನಿಕಟವರ್ತಿಗಳು' ಎಂದು ಆರೋಪಿಸಿದ್ದಾರೆ.

'ಇದು ಗಂಭೀರ ಅಪರಾಧವಾಗಿರುವುದರಿಂದ, ಈ ಪ್ರಕರಣವನ್ನು ಸಿಸಿಬಿಗೆ ತನಿಖೆ ಮಾಡಲು ಸಾಧ್ಯವಿಲ್ಲ. ಇದನ್ನು ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ' ಎಂದರು.

ಅದರೊಂದಿಗೆ, ಎಂಎಸ್ಎಲ್ ಟೆಕ್ನೋ ಸೊಲ್ಯೂಷನ್ಸ್ ತಯಾರಿಸಿದ ಆಧಾರ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಆದೇಶ ಹೊರಡಿಸಬೇಕು. ಏಕೆಂದರೆ, ಭವಿಷ್ಯದಲ್ಲಿ ಇವುಗಳನ್ನು ಎಲ್ಲಿಯೂ ಬಳಸುವುದಿಲ್ಲ ಎನ್ನುವುದು ಕಷ್ಟ. ಆರೋಪಿಗಳು ಎಷ್ಟೇ ಶಕ್ತಿಶಾಲಿಗಳಾಗಿದ್ದರೂ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು. ಏಕೆಂದರೆ, ಇದು ರಾಜಕೀಯ ವಿಷಯವಲ್ಲ,  ಸಮಾಜದ ಭದ್ರತೆಗೆ ಸಂಬಂಧಿಸಿದ್ದು ಎಂದು ಅವರು ಆಗ್ರಹಿಸಿದರು.

ಆಧಾರ್ ಕಾರ್ಡ್ ತಯಾರಿಸಲು ಜನನ ಪ್ರಮಾಣ ಪತ್ರ ಹೊಂದಿರಬೇಕು. ಜನನ ಪ್ರಮಾಣಪತ್ರವನ್ನು ಬೈಪಾಸ್ ಮಾಡುವ ಮೂಲಕ ಈ ದಾಖಲೆಗಳನ್ನು ರಚಿಸಿದರೆ, ಆರೋಪಿಗಳಿಗಿರುವ ಪ್ರಭಾವ ಏನೆಂಬುದನ್ನು ಅರ್ಥಮಾಡಿಕೊಳ್ಳಬಹುದು. 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ಈ ನಕಲಿ ಆಧಾರ್ ಮತ್ತು ವೋಟರ್ ಐಡಿಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.

'ಇದು ಎಲ್ಲೆಲ್ಲಿ ಹರಡಿದೆ, ಈ ಗುರುತಿನ ಚೀಟಿಗಳನ್ನು ಯಾರಿಗೆ ನೀಡುತ್ತಾರೆ, ಇದರಿಂದ ಉಂಟಾಗುವ ತೊಡಕುಗಳನ್ನು ಕಂಡುಹಿಡಿಯಲು ಇಡೀ ಜಾಲವನ್ನು ಬಹಿರಂಗಪಡಿಸಲು ನಾವು ಭಾರತದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ. ಈ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐನಿಂದ ತನಿಖೆಗೆ ಒಳಪಡಿಸಲು ನಾವು ಇಸಿಐಗೆ ಒತ್ತಾಯಿಸುತ್ತೇವೆ' ಎಂದು ಹೇಳಿದರು.

ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಗಂಭೀರವಾಗಿ ಪರಿಗಣಿಸಬೇಕು. ಸುರೇಶ್ ಅವರಿಗೆ ಇದರಿಂದ ಯಾವ ರೀತಿ ಲಾಭವಾಗಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಮನವಿ ಮಾಡಿದರು. ಸಚಿವ ಸುರೇಶ್ ವಿರುದ್ಧ ಸೋತ ಹೆಬ್ಬಾಳದ ಬಿಜೆಪಿ ಪರಾಜಿತ ಅಭ್ಯರ್ಥಿ ಜಗದೀಶ ಕಟ್ಟಾ ಕೆಎಸ್ ಮೊದಲಿನಿಂದಲೂ ನಕಲಿ ಹಾಗೂ ತಿರುಚಿದ ಗುರುತಿನ ಚೀಟಿ ತಯಾರಿಸಿ ನಕಲಿ ಮತದಾರರನ್ನು ಸೃಷ್ಟಿಸಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ ಎಂದು ಹೇಳುತ್ತಿದ್ದರು ಎಂದರು.

ಮೌನೇಶ್ ಪರಿಚಯವಿಲ್ಲ ಎಂಬ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಮೌನೇಶ್ ಕುಮಾರ್ ಸ್ಕೂಟರ್ ಓಡಿಸುತ್ತಿರುವ ಹಾಗೂ ಬೈರತಿ ಸುರೇಶ್ ಪಿಲಿಯನ್ ರೈಡರ್ ಆಗಿ ಕುಳಿತಿರುವ ಭಾವಚಿತ್ರವನ್ನು ತೋರಿಸಿದರು.

'ಯಾವುದೇ ಶಾಸಕ ಯಾರ ಸ್ಕೂಟರ್‌ನಲ್ಲಿಯೂ ಕೂರುವುದಿಲ್ಲ. ಶಾಸಕರು ಯಾರೊಂದಿಗೆ ಪಿಲಿಯನ್ ಸವಾರಿ ಮಾಡುತ್ತಾರೋ, ಅಂತವರ ಮೇಲೆ ಅವರಿಗೆ ಹೆಚ್ಚಿನ ನಂಬಿಕೆ ಇರಬೇಕು. ಬೈಕ್ ಸವಾರ ಅವರಿಗೆ ತಿಳಿದಿರಬೇಕು ಮತ್ತು ಮಾರ್ಗವೂ ತಿಳಿದಿರಬೇಕು. ಮೂವರು ಸಚಿವರ ಆಪ್ತರು ಎಂಬುದು ಎಲ್ಲರಿಗೂ ತಿಳಿದಿದೆ' ಎಂದು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com