ಸಿಎಂ ಸ್ಥಾನ ಖಾಲಿ ಇಲ್ಲ, ದಲಿತ ಸಿಎಂ ಕುರಿತು ಪ್ರಶ್ನೆ ಉದ್ಭವಿಸುವುದಿಲ್ಲ: ಗೃಹ ಸಚಿವ ಪರಮೇಶ್ವರ್

ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೀಗಾಗಿ ದಲಿತ ಸಿಎಂ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮವಾರ ಹೇಳಿದರು.
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೀಗಾಗಿ ದಲಿತ ಸಿಎಂ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮವಾರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೋಜನಕೂಟ ಕುರಿತು ಬಿಜೆಪಿಯವರು ಅನೇಕ ವ್ಯಾಖ್ಯಾನಗಳ ಮೂಲಕ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಒಡೆದ ಬಾಗಿಲು, ಮೂರು, ನಾಲ್ಕು ಬಾಗಿಲು ಎಂದು ಹೇಳುತ್ತಾರೆ. ನಮ್ಮ ಪಕ್ಷದ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಬಣಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ನಾವು ಬಿಜೆಪಿಯವರು ಮಾತುಗಳಿಗೆ ಪ್ರಾಮುಖ್ಯತೆ ಕೊಡುವುದಿಲ್ಲ. ನಮ್ಮ ಮನೆಯ ಬೋಜನಕೂಟದಲ್ಲಿ ಏನಾದರೂ ಚರ್ಚೆಯಾಗಲಿ, ಅದು ಬಿಜೆಪಿಯವರಿಗೆ ಏಕೆ ಬೇಕು? ಯಡಿಯೂರಪ್ಪ ಮನೆಯಲ್ಲಿ ಏನಾಗುತ್ತೆ, ಬೊಮ್ಮಾಯಿ ಮನೆಯಲ್ಲಿ ಏನಾಗುತ್ತದೆ ಎಂದು ನಾವು ಕೇಳ್ಳುತ್ತೇವೆಯೇ. ನಾವು ಸುಮ್ಮನಿದ್ದೇವೆ ಎಂದು ಏನು ಬೇಕಾದರೂ ತಿರುಗಳಿಲ್ಲದಂತೆ ಮಾತನಾಡಿದರೆ ಜನ ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಬೇಸರವಾಗಿದ್ದಾರೆ ಎಂಬುದು ಆಧಾರ ರಹಿತ, ಯಾವ ರೀತಿಯ ಅಸಮಾಧಾನಗಳು ಇಲ್ಲ. ಒಂದಿಬ್ಬರೆ ಸಚಿವರಿಗೆ ಆದ್ಯತೆ ಇದೆ ಎಂಬುದು ಸರಿಯಲ್ಲ, ಸಂಪುಟದಲ್ಲಿ 33 ಮಂದಿ ಸಚಿವರಿದ್ದಾರೆ, ಎಲ್ಲರು ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಸಮಾನತೆ ಇದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆ ಮುಖ್ಯಮಂತ್ರಿಯವರು ಹೇಳಿದ್ದಾರೆ. ಇಲ್ಲಿ ಯಾರನ್ನೂ ನಿರ್ಲಕ್ಷ್ಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿಗಳ ಮೂಲಕ ಅವರನ್ನು ಸರ್ಕಾರದ ಭಾಗವಾಗಿ ಮಾಡಿಕೊಳ್ಳುತ್ತೇವೆ. ಪಕ್ಷಕ್ಕಾಗಿ ದುಡಿದವರು, ಹತ್ತಾರು ವರ್ಷ ಕೆಲಸ ಮಾಡಿದವರನ್ನು ಪರಿಗಣಿಸಲಾಗುವುದು. ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದು, ನೇಮಕಗಳ್ಳುವವರ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಸಚಿವರ ಮಕ್ಕಳೇ ಸಚಿವರಾಗುತ್ತಾರೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ಗೃಹ ಸಚಿವರು ನಿರಾಕರಿಸಿದರು.

ಗಂಭೀರ ಸಮಸ್ಯೆಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಹುಲಿ ಉಗುರು ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಆಡಳಿತ ವ್ಯವಸ್ಥೆಯಲ್ಲಿ ಪ್ರತಿದಿನ ಒಂದೊಂದು ಸಮಸ್ಯೆಗಳು ಕಂಡು ಬರುತ್ತವೆ. ಅರಣ್ಯ ಅಥವಾ ಪೊಲೀಸ್ ಅಧಿಕಾರಿಗಳು ಅವನ್ನು ಸರಿ ಪಡಿಸುತ್ತಾರೆ ಎಂದರು.

ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ, ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ, ದೂರು ನಿರ್ದಿಷ್ಟವಾಗಿರಬೇಕು. ಅಜೆಂಡ ಇಟ್ಕೊಂಡು ಯಾರು ಮಾಡೋದಿಲ್ಲ, ಇಲಾಖೆಯ ತಪ್ಪು ಕಂಡಾಗ ಸರಿಪಡಿಸಲಾಗುತ್ತದೆ. ಅದಕ್ಕೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಕೆಲಸ ಇಲ್ಲದ ಬಿಜೆಪಿಯವರು ಅನಗತ್ಯವಾಗಿ ವ್ಯಾಖ್ಯಾನ ಮಾಡುತ್ತಾರೆ ಎಂದರು.

ಬಿಜೆಪಿಯವರು ಟೀಕೆ ಮಾಡಿಕೊಂಡು ಇರಲಿ, ನಾವು ನಮ್ಮ ಆಡಳಿತ ನಾವು ಮಾಡುತ್ತೇವೆ, ಜನ ಸಂತೋಷವಾಗಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಜನ ಎಲ್ಲಾದರೂ ಪ್ರತಿಭಟನೆ ಮಾಡ್ತಿದ್ದಾರಾ? ಬಿಜೆಪಿಯವರೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೊದಲು ಅವರಲ್ಲಿ ಇರುವ ಒಳ ಜಗಳವನ್ನು ಸರಿ ಮಾಡಿಕೊಳ್ಳಲಿ. ರಾಜ್ಯಧ್ಯಕ್ಷರನ್ನ ಮೊದಲು ಆಯ್ಕೆ ಮಾಡಲಿ. ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಲಿ ಎಂದು ಲೇವಡಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com