ಒಳಜಗಳದಲ್ಲಿ ಒಳಗೇ ಬೆಂಕಿ ಇದೆ, ಇನ್ನು ಹೊರಗೇನು ತೋರಿಸೋದಿದೆ? ಬಿಜೆಪಿ ಲೇವಡಿ

ಬೆಂಗಳೂರಿನಲ್ಲಿ ‌I.N.D.I.A. ಮೈತ್ರಿ ಪಕ್ಷಗಳ ಮೊದಲ ಸಭೆ ನಡೆಯಿತು. ಇದೀಗ ಮುಂಬೈನಲ್ಲಿ ಎರಡನೇ ಸಭೆ ನಡೆಯುತ್ತಿದೆ. ಬೆಂಗಳೂರಿನಿಂದ ಮುಂಬೈವರೆಗೆ ಈ ಬಲವಂತದ ಒಕ್ಕೂಟ ಸಾಗಿ ಬಂದ ಹಾದಿಯೇ ಏರುತಗ್ಗುಗಳ ಹಾದಿ.
ಬಿಜೆಪಿ ಟ್ವೀಟ್
ಬಿಜೆಪಿ ಟ್ವೀಟ್

ಬೆಂಗಳೂರು: ನಾಯಕತ್ವ ವಹಿಸಿಕೊಳ್ಳುವುದಕ್ಕೇ ಹಿಂದೇಟು ಹಾಕಿ, ವಹಿಸಿಕೊಂಡ ಮೇಲೆಯೂ ತನ್ನ ಪಕ್ಷದಲ್ಲೇ ಎಲ್ಲರನ್ನು ಜತೆಗೆ ಕೊಂಡೊಯ್ಯಲಾಗದೆ, ಪಕ್ಷ ಮತ್ತು ಯುಪಿಎ ಮೈತ್ರಿಕೂಟವನ್ನೂ ಸೋಲಿಸಿ, ಈಗ ಬ್ರ್ಯಾಂಡ್‌ ಬದಲಿಸಿದ ಮೇಲೆ ಅಲ್ಲಿಯೂ ನಾಯಕತ್ವಕ್ಕೆ ಅವಕಾಶ ಸಿಗುತ್ತಿಲ್ಲ ಎಂದರೆ ಅಂಥವರನ್ನು ಸಮರ್ಥ ರಾಜಕೀಯ ನಾಯಕ ಎಂದು ಪರಿಗಣಿಸುವುದಕ್ಕೆ ಹೇಗೆ ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮೈತ್ರಿ ಹೆಸರಿನಿಂದಲೇ ಅಪಸ್ವರ ಆರಂಭವಾಗಿ, ಕ್ಷೇತ್ರಗಳ ಹಂತದಲ್ಲಿ ಸ್ಪರ್ಧಿಸುವ ವಿಚಾರದಿಂದ ಹಿಡಿದು, ನಾಯಕತ್ವ ವಹಿಸಿಕೊಳ್ಳುವವರೆಗೆ ಎಲ್ಲಿಯೂ ತಾಳಮೇಳವಿಲ್ಲದ ಈ ಮೈತ್ರಿಯ ಪ್ರಹಸನ ಬೆಂಗಳೂರಿನಿಂದ ಮುಂಬೈ ತಲುಪುವಷ್ಟರಲ್ಲಿ ಟಿವಿ ಧಾರಾವಾಹಿಯಂತಾಗಿದೆ. ದೆಹಲಿ ತಲುಪುವಷ್ಟರಲ್ಲಿ ಬಡಿದಾಟ ಸಹಿತದ ರಿಯಾಲಿಟಿ ಶೋ ಆಗಲಿದೆ.

ಈಗಾಗಲೇ ಕೊಟ್ಟ ಜವಾಬ್ದಾರಿ ನಿಭಾಯಿಸಲಾಗದೆ ಸೋತು, ಯಾವುದೇ ಜವಾಬ್ದಾರಿ ಹೊರಲು‌ ಸಾಮರ್ಥ್ಯವಿಲ್ಲ ಎಂದು ಸಾಬೀತಾದ ರಾಹುಲ್ ಗಾಂಧಿಯನ್ನು ಕಡೇ ಪಕ್ಷ ಪೋಸ್ಟರ್‌ನಲ್ಲಾದರೂ ಹೀರೋ ರೀತಿ ತೋರಿಸುವುದು ಕಾಂಗ್ರೆಸ್‌ನ ಮಾರ್ಕೆಟಿಂಗ್ ತಂಡದ ಗುರಿ. ಹಾಗಾಗಿ ರಾಹುಲ್ ಫೋಟೋವನ್ನು ನಾಯಕನ ರೀತಿ ತೋರಿಸಿ  ಮಮತಾ, ಸ್ಟಾಲಿನ್ ಅಂಥವರನ್ನು ಪೋಷಕ ಪಾತ್ರಧಾರಿಗಳಂತೆ ತೋರಿಸಿದ್ದಕ್ಕೆ ಮೈತ್ರಿಯ ಒಳಗೆ ಈಗಾಗಲೇ ಗದ್ದಲ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ವಿಫಲ ಮೈತ್ರಿಯ ವೇದನೆಯಲ್ಲಿರುವ @OfficeofUT ಕೂಡ ಸಿಡಿದೆದ್ದಿದ್ದಾರೆ ಎಂದಿದೆ.

ಲೋಕಸಭೆಗೂ ಮೊದಲಿನ ಯಾವುದೇ ವಿಧಾನಸಭಾ ಚುನಾವಣೆಗೆ ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆಯೇ ಇಲ್ಲ ಎಂದು ಆಮ್ ಆದ್ಮಿ ಪಾರ್ಟಿ ಈಗಾಗಲೇ ಹೇಳಿದೆ.  ದೆಹಲಿ ಹಾಗೂ ಪಂಜಾಬ್‌ನಲ್ಲಿ ಮುಂದಿನ ಚುನಾವಣೆಯಲ್ಲಿ ತಾವು ಎಲ್ಲಾ ಕ್ಷೇತ್ರಗಳನ್ನೂ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಈಗಾಗಲೇ ಹೇಳಿದೆ. ತಾವೇ ನೀರಲ್ಲಿ ಮುಳುಗಿರುವಾಗ ಉಳಿದವರನ್ನು ಕೈ ಹಿಡಿದು ಮೇಲೆತ್ತುವುದು ಹೇಗೆ ಎಂಬುದು ಮೈತ್ರಿಯ ಇಪ್ಪತ್ತಾರೂ ಪಕ್ಷಗಳ ಚಿಂತೆ. ಹಾಗಾಗಿ ರಾಜ್ಯಗಳ ಒಳಗೇ ಅವರವರೊಳಗೇ ಶ್ರುತಿ ಸೇರುತ್ತಿಲ್ಲ ಎಂದು ಟೀಕಿಸಿದೆ.

ತಾನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡರೆ ತನ್ನವರೆದುರೇ ಹಾಸ್ಯಾಸ್ಪದವಾಗಿ ಇರುವವರೂ ಬಿಟ್ಟು ಹೋಗುತ್ತಾರೆ ಎಂಬ ಭಯದಲ್ಲಿ ತನ್ನಲ್ಲಿ ಯಾರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯಿಲ್ಲ ಎಂದು  ಕಾಂಗ್ರೆಸ್  ಹೇಳಿತು.  ಹಾಗಿದ್ದರೆ ಅರವಿಂದ್ ಕೇಜ್ರಿವಾಲ್  ಅವರನ್ನೇ ಪ್ರಧಾನಿ ಆಕಾಂಕ್ಷಿಯೆಂದು ಬಿಂಬಿಸಿ ಎಂದು ಆಮ್ ಆದ್ಮಿ ಪಾರ್ಟಿ ಸತ್ವಪರೀಕ್ಷೆಗೆ ಇಳಿದರೆ ಅದನ್ನೂ ಒಪ್ಪಲು ಪಾಳೆಗಾರಿಕೆ ಮಾಡಿಕೊಂಡು ಬಂದ ಉಳಿದವರಿಗೆ ಮನಸ್ಸಿಲ್ಲ.

ಹನ್ನೊಂದು ಜನರ ಸಮಿತಿ ಸೇರಿ ಪ್ರಧಾನಿ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ ಎನ್ನಲಾಗಿದೆ. ಆದರೆ ಹನ್ನೊಂದೂ ಮಂದಿ ತಮಗೇ ಆ ಸಾಮರ್ಥ್ಯ ಇರುವುದು ಎಂಬಂತೆ ಮಾತನಾಡಿದ್ದಾರೆ, ಕೊನೆಗೆ ಹನ್ನೊಂದರಲ್ಲಿ ಯಾವೊಂದೂ ಇಲ್ಲ.

ಬೆಂಗಳೂರಿನಲ್ಲಿ ‌I.N.D.I.A. ಮೈತ್ರಿ ಪಕ್ಷಗಳ ಮೊದಲ ಸಭೆ ನಡೆಯಿತು. ಇದೀಗ ಮುಂಬೈನಲ್ಲಿ ಎರಡನೇ ಸಭೆ ನಡೆಯುತ್ತಿದೆ. ಬೆಂಗಳೂರಿನಿಂದ ಮುಂಬೈವರೆಗೆ ಈ ಬಲವಂತದ ಒಕ್ಕೂಟ ಸಾಗಿ ಬಂದ ಹಾದಿಯೇ ಏರುತಗ್ಗುಗಳ ಹಾದಿ.

NDA ಹೆಸರಿಗೇ ಎರಡು i ಸೇರಿಸಿ ಮಾರ್ಪಾಟು ಮಾಡಿದ್ದು intelligence ಅಲ್ಲ, ಬದಲಾಗಿ ದಡ್ಡತನ ಎಂಬ ಅಭಿಪ್ರಾಯ ಮೊದಲು ಬಂದದ್ದೇ ಅವರದೇ ಮೈತ್ರಿಕೂಟದ ಒಳಗಿಂದ. ಹಾಗಾಗಿ ಹೆಸರು ಘೋಷಣೆಗೆ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದೂ ಅಲ್ಲದೆ ಘೋಷಿಸುವ ಪತ್ರಿಕಾಗೋಷ್ಠಿಯಲ್ಲಿಯೂ ಕಾಣಿಸಿಕೊಳ್ಳಲೇ ಇಲ್ಲ ಎಂದು ಜರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com