ಹಾಸನ: ಪ್ರತಿಪಕ್ಷಗಳ ಮೈತ್ರಿಕೂಟ (I.N.D.I.A) ಇದೂವರೆಗೆ ಮೂರು ಸಭೆಗಳನ್ನು ನಡೆಸಿದ್ದರೂ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಸ್ಪಷ್ಟತೆ ಮತ್ತು ಒಮ್ಮತಗಳು ಮೂಡಿ ಬಂದಿಲ್ಲ. ಹೀಗಿರುವಾಗ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯನ್ನು ಹೇಗೆ ಎದುರಿಸುತ್ತವೆ ಎಂಬುದು ತಿಳಿಯುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ, ಪ್ರತಿಪಕ್ಷಗಳ ಮೈತ್ರಿಕೂಟ ಚುನಾವಣೆಗೆ ಯಾವುದೇ ತಂತ್ರಗಳನ್ನು ರೂಪಿಸಿಲ್ಲ. ಸಭೆಗಳಲ್ಲಿ ಕೇವಲ ಸಾಮಾನ್ಯ ವಿಚಾರಗಳ ಬಗ್ಗೆಯಷ್ಟೇ ಚರ್ಚೆ ನಡೆಸಿದ್ದಾರೆಂದು ಹೇಳಿದರು. ಇದೇ ವೇಳೆ ಸ್ಥಿರ ಸರ್ಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಪಕ್ಷಗಳು ನೀಡಿರುವ ಹೇಳಿಕೆಯನ್ನು ದೇವೇಗೌಡ ಅವರು, ಸ್ವಾಗತಿಸಿದರು. ಬಳಿಕ ಕಾದು ನೋಡೋಣ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೊಂದಿಗೆ ಮಾತನಾಡಬೇಕು? ಬಿಜೆಪಿ ತನ್ನ ರಾಜ್ಯಾಧ್ಯಕ್ಷನನ್ನೇ ಇನ್ನೂ ಆಯ್ಕೆ ಮಾಡಿಲ್ಲ. ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಜಿ.ಟಿ.ದೇವೇಗೌಡ ನೇತೃತ್ವದ ಕೋರ್ ಕಮಿಟಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಭ್ಯರ್ಥಿಗಳನ್ನು ನಿರ್ಧರಿಸಲಿದೆ. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಮಣಿಸಲು ಸಮಿತಿಯು ಕಾರ್ಯತಂತ್ರಗಳನ್ನು ರೂಪಿಸಲಿದೆ. ಪ್ರಚಾರದ ವೇಳೆ ಹಾಸನ ಸೇರಿದಂತೆ ಕೆಲ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆಂದು ಹೇಳಿದರು.
ಬಳಿಕ ಪಕ್ಷಾಂತರ ಊಹಾಪೋಹಗಳಿಗೆ ಉತ್ತರಿಸಿ, ಜೆಡಿಎಸ್‌ನ ಯಾವುದೇ ಶಾಸಕರು ಅಥವಾ ಮುಖಂಡರು ಪಕ್ಷ ಬಿಡುತ್ತಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷವನ್ನು ಉಳಿಸುವ ಪ್ರಯತ್ನವನ್ನು ಮುಂದುವರಿಸುತ್ತೇನೆಂದು ತಿಳಿಸಿದರು.
ನಂತರ ಕಾವೇರಿ ವಿವಾದ ಕುರಿತು ಮಾತನಾಡಿ, ಭೀಕರ ಬರಗಾಲದ ನಡುವೆಯೂ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಹಿರಿಯ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. “ನಾನು ನೀರಾವರಿ ಇಲಾಖೆಗೆ ಕರೆ ಮಾಡಿದೆ, ಆದರೆ ಹಿರಿಯ ಅಧಿಕಾರಿಗಳು ಅಂಕಿಅಂಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು ಎಂದು ಆರೋಪಿಸಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆಗೆ ಆದೇಶಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
Advertisement