ಒಂದು ವೇಳೆ ಹೊಟ್ಟೆಯಲ್ಲಿ ಸೋಂಕು ಇದ್ದರೆ ನೀವು ತಲೆಯನ್ನೇ ಕತ್ತರಿಸುತ್ತೀರಾ? ಸಂತೋಷ್ ಟ್ವೀಟ್; ಖರ್ಗೆ ತಿರುಗೇಟು!

ಬಿ.ಎಲ್‌. ಸಂತೋಷ್‌ ಜಿ.. ಸೋಂಕು ಇದೆ ಎನ್ನುವುದನ್ನು ಒಪ್ಪಿಕೊಂಡ್ರಲ್ವಾ? ಅಷ್ಟು ಸಾಕು ಎಂದಿದ್ದಾರೆ. ಯಾವ ಧರ್ಮವು ಸಮಾನತೆಯನ್ನು ಪ್ರತಿಪಾದಿಸುವುದಿಲ್ಲವೋ? ಯಾವುದು ಮಾನವ ಘನತೆಯನ್ನು ಖಾತ್ರಿಪಡಿಸುವುದಿಲ್ಲವೋ ನನ್ನ ಪ್ರಕಾರ ಅದು ಧರ್ಮವೇ ಅಲ್ಲ.
ಬಿಎಲ್ ಸಂತೋಷ್ ಮತ್ತು ಪ್ರಿಯಾಂಕ್ ಖರ್ಗೆ
ಬಿಎಲ್ ಸಂತೋಷ್ ಮತ್ತು ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಚಿವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂಬ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಕ್ರಿಯೆಯ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಕ್ರೋಶ ಹೊರ ಹಾಕಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಮಾನತೆಯನ್ನು ಉತ್ತೇಜಿಸದ ಅಥವಾ ಮಾನವನ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮ ನನ್ನ ಪ್ರಕಾರ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮವು ರೋಗದಷ್ಟೇ ಕೆಟ್ಟದ್ದು” ಎಂದು ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದರು. ತಿರುಗೇಟು ನೀಡಿರುವ ಬಿ.ಎಲ್. ಸಂತೋಷ್ ‘ಹಾಗಾದರೆ ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕು ಇದ್ದರೆ, ನೀವು ತಲೆಯನ್ನು ಕತ್ತರಿಸುತ್ತೀರಾ??’ ಎಂದು ಪ್ರಶ್ನಿಸಿದ್ದಾರೆ.

ಬಿಎಲ್ ಸಂತೋಷ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧ ಸಚಿವ ಪ್ರಿಯಾಂಕ್ ಖರ್ಗೆ, ʻಬಿ.ಎಲ್‌. ಸಂತೋಷ್‌ಜಿ.. ಸೋಂಕು ಇದೆ ಎನ್ನುವುದನ್ನು ಒಪ್ಪಿಕೊಂಡ್ರಲ್ವಾ? ಅಷ್ಟು ಸಾಕುʼʼ ಎಂದಿದ್ದಾರೆ. ಯಾವ ಧರ್ಮವು ಸಮಾನತೆಯನ್ನು ಪ್ರತಿಪಾದಿಸುವುದಿಲ್ಲವೋ? ಯಾವುದು ಮಾನವ ಘನತೆಯನ್ನು ಖಾತ್ರಿಪಡಿಸುವುದಿಲ್ಲವೋ ನನ್ನ ಪ್ರಕಾರ ಅದು ಧರ್ಮವೇ ಅಲ್ಲ. ಯಾವ ಧರ್ಮವು ಸಮಾನವಾದ ಹಕ್ಕುಗಳನ್ನು ನೀಡುವುದಿಲ್ಲವೋ, ಯಾವುದು ನಿಮ್ಮನ್ನು ಮನುಷ್ಯರಂತೆ ನೋಡುವುದಿಲ್ಲವೋ ಅದು ಒಂದು ರೋಗವೇ.. ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದರು.

‘ಹಾಗಾದರೆ ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕು ಇದ್ದರೆ, ನೀವು ತಲೆಯನ್ನು ಕತ್ತರಿಸುತ್ತೀರಾ? ಎಂದು ಸಂತೋಷ್ ಪ್ರಶ್ನಿಸಿದ್ದರು. ಬಿ.ಎಲ್‌. ಸಂತೋಷ್‌ ಅವರು ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

“ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.” ಎಂದು ಟ್ವೀಟ್‌ ಆರಂಭಿಸಿರುವ ಅವರು, ಬಿ.ಎಲ್‌.ಸಂತೋಷ್‌ ಅವರೇ ಟ್ರೀಟ್‌ ಮೆಂಟ್‌ ಮಾಡಬೇಕಾದ ಒಂದು ಸೋಂಕು ಇರುವುದನ್ನು ಒಪ್ಪಿಕೊಂಡಿರುವುದು ಸಂತೋಷದ ಸಂಗತಿ ಎಂದಿದ್ದಾರೆ.

ಕಳೆದ ಸಾವಿರಾರು ವರ್ಷಗಳಿಂದ ಹಲವಾರು ಸೋಂಕುಗಳು ಇದ್ದವು. ಈಗಲೂ ನಮ್ಮ ನಡುವೆ ಅವುಗಳು ಇವೆ. ಮನುಷ್ಯರ ನಡುವೆ ತಾರತಮ್ಯ ಮಾಡುವ ಸೋಂಕು, ಮನುಷ್ಯರಾಗಿ ಗೌರವವನು ನೀಡದ ಸೋಂಕು ಎಂದು ಪ್ರಿಯಾಂಕ್‌ ಹೇಳಿದ್ದಾರೆ. ನಾನು ನಿಮ್ಮಷ್ಟು ಬುದ್ಧಿವಂತನಲ್ಲ.. ಹೀಗಾಗ ಕೆಲವು ವಿಚಾರಗಳಿಗೆ ಸಂಬಂಧಿಸಿ ನನಗೆ ಜ್ಞಾನ ಕೊಡಿ ಎಂದು ಕೇಳಿರುವ ಪ್ರಿಯಾಂಕ್‌ ಖರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    ಸಮಾಜದಲ್ಲಿ ಈ ನಿಯಮಗಳನ್ನು ಮಾಡಿದವರು ಯಾರು?
    ಕೆಲವರಿಗೆ ಇತರರಿಗೆ ಹೆಚ್ಚು ಹಕ್ಕುದಾರಿಕೆ ಸಿಗಲು ಕಾರಣವಾಗಿದ್ದು ಏನು?
    ನಮ್ಮನ್ನು ಜಾತಿಯ ಆಧಾರದಲ್ಲಿ ವಿಭಜನೆ ಮಾಡಿದವರು ಯಾರು?
    ಕೆಲವು ಮನುಷ್ಯರು ಯಾಕೆ ಅಸ್ಪೃಶ್ಯರು?
    ಅವರು ಇವತ್ತಿಗೂ ದೇವಸ್ಥಾನ ಪ್ರವೇಶಿಸುವಂತಿಲ್ಲ ಯಾಕೆ?
    ಮಹಿಳೆಯರನ್ನು ಕೀಳಾಗಿ ಕಾಣುವ ಪದ್ಧತಿಗಳನ್ನು ಆರಂಭ ಮಾಡಿದ್ದು ಯಾರು?
    ಅಸಮಾನತೆ ಮತ್ತು ದಮನಕಾರಿ ನೀತಿಗೆ ಕಾರಣವಾದ ಸಾಮಾಜಿಕ ಸ್ವರೂಪ ಆಧರಿತ ಜಾತಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಇಲ್ಲಿ ಯಾರೂ ತಲೆ ಕಡಿಯಿರಿ ಎಂದು ಹೇಳುತ್ತಿಲ್ಲ. ಈ ಸೋಂಕುಗಳನ್ನು ಸಮಾನ ಹಕ್ಕು ಮತ್ತು ಗೌರವಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳುತ್ತಿದ್ದಾರೆ ಅಷ್ಟೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿರುವುದು ಸಂವಿಧಾನ ಮತ್ತು ನೀವು ಹಾಗೂ ನಿಮ್ಮ ಸಂಘಟನೆ ಅದಕ್ಕೆ ವಿರುದ್ಧವಾಗಿದ್ದೀರಿ.

ಸಂತೋಷ್‌ ಜಿ ಅವರೇ ನೀವು ಕರ್ನಾಟಕದವರಿದ್ದೀರಿ. ದಯವಿಟ್ಟು ಗುರು ಬಸವಣ್ಣರ ಸಂದೇಶವನ್ನು ಪ್ರಚಾರ ಮಾಡಿ. ಇದರಿಂದ ನಮಗೆ ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. “ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ ಎಂದು ಪ್ರಿಯಾಂಕ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com