ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ಮಾತ್ರ ಸಹಕಾರಿಯಾಗಲಿದೆ ಎಂದಿರುವ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ‘ಅಧಿಕಾರವನ್ನು ಬಿಟ್ಟುಕೊಡಲು ನಾನೇನು ಸಂತನಲ್ಲ’, ಸಕ್ರಿಯ ರಾಜಕಾರಣದಲ್ಲಿರುವ ನಾನು ಸಚಿವ ಸಂಪುಟದಲ್ಲಿರಲು ಇಷ್ಟ ಪಡುತ್ತೇನೆ ಎಂದು ಮಂಗಳವಾರ ಹೇಳಿದ್ದಾರೆ.
ಕಳೆದ 100 ದಿನಗಳಲ್ಲಿ ಅಧಿಕಾರಿಗಳು ಮತ್ತು ಸಚಿವರ ಕಾರ್ಯನಿರ್ವಹಣೆ ಬಗ್ಗೆ ಎರಡು ಬಾರಿ ದೂರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ರಾಯರೆಡ್ಡಿ, ತಮ್ಮ ಆಕಾಂಕ್ಷೆಗಳನ್ನು ತ್ಯಾಗ ಮಾಡಿಲ್ಲ ಮತ್ತು ಸಚಿವ ಸಂಪುಟಕ್ಕೆ ಸೇರ್ಪಡೆಯಾಗದಿರಲು 'ನಿಜವಾದ ಕಾರಣ' ನನಗೆ ತಿಳಿದಿಲ್ಲ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಸಿಎಂಗೆ ಪತ್ರ ಬರೆದಿದ್ದೇನೆ ಎನ್ನುವುದು ಸರಿಯಲ್ಲ. ಸಚಿವ ಸಂಪುಟಕ್ಕೆ ಸೇರ್ಪಡೆಯಾಗದಿರುವ ಬಗ್ಗೆ ನನಗೆ ಬೇಸರವೂ ಇಲ್ಲ ಅಥವಾ ಬಿಟ್ಟುಕೊಟ್ಟ ಭಾವನೆಯೂ ಇಲ್ಲ. ನಾನು ಕಳೆದ 40 ವರ್ಷಗಳಿಂದ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ ಮತ್ತು ಅದು ಇಂದಿಗೂ ಮುಂದುವರೆದಿದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾವಿಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ಮಾತ್ರ ಯೋಚಿಸುತ್ತೇವೆ. ಇದುವೇ ರಾಜ್ಯಾಡಳಿತದಲ್ಲಿನ ಲೋಪದೋಷದ ಕುರಿತು ಸಿಎಂಗೆ ಪತ್ರ ಬರೆಯುವಂತೆ ಮಾಡಿದೆ. ಅವರೂ (ಸಿಎಂ) ನನ್ನ ಪತ್ರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದು ವಿವರಿಸಿದರು.
ತಾನು ಸಿಎಂಗೆ ಪತ್ರ ಬರೆದಿರುವುದು ಸರ್ಕಾರಕ್ಕೆ ಅಪಖ್ಯಾತಿ ತರಲು ಅಥವಾ ಯಾವುದೇ ಹುದ್ದೆಯನ್ನು ಪಡೆಯುವ ಉದ್ದೇಶವನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದರು. ಆಡಳಿತದಲ್ಲಿನ ಲೋಪದೋಷವನ್ನು ಎತ್ತಿ ತೋರಿಸಿ ಸಿಎಂಗೆ ಪತ್ರ ಬರೆಯುವುದು ಕೂಡ ಉತ್ತಮ ಆಡಳಿತಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
'ನನ್ನ ಪತ್ರಕ್ಕೆ ಸ್ಪಂದಿಸಿ ಇಂಧನ ಸಚಿವ ಕೆಜೆ ಜಾರ್ಜ್ ಸಭೆ ಕರೆದಿದ್ದು, ಕೊಪ್ಪಳ ಜಿಲ್ಲೆಗೆ ಗೇಮ್‌ಚೇಂಜರ್ ಆಗಲಿರುವ ಗದಗ-ವಾಡಿ ರೈಲು ಮಾರ್ಗದ ವೇಗ ಹೆಚ್ಚಿಸುವ ಕುರಿತು ಬುಧವಾರ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಸಭೆ ನಿಗದಿಯಾಗಿದೆ ಎಂದು ರಾಯರೆಡ್ಡಿ ಹೇಳಿದರು.
Advertisement