ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡ
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡ

ಮೋದಿ, ಅಮಿತ್ ಶಾ ಭೇಟಿ ಮಾಡಿದ್ದು ನಿಜ; ಪಕ್ಷದ ಉಳಿವಿಗೆ, ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಈ ಮೈತ್ರಿ ಅನಿವಾರ್ಯ: ಹೆಚ್ ಡಿ ದೇವೇಗೌಡ

2024ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ ಎನ್ನುವುದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. 
Published on

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ ಎನ್ನುವುದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. 

ಈ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ-ಗೃಹ ಸಚಿವ ಅಮಿತ್ ಶಾ ಮಧ್ಯೆ ಒಂದು ಹಂತದ ಮಾತುಕತೆ ನಡೆದಿದೆ ಎಂಬ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ. ಈ ವಿಷಯವನ್ನು ಸ್ವತಃ ಹೆಚ್ ಡಿ ದೇವೇಗೌಡರೇ ಖಚಿತಪಡಿಸಿದ್ದಾರೆ. 

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಗೌಡರು, ಪ್ರಾದೇಶಿಕ ಪಕ್ಷವನ್ನು ಉಳಿಸಲು ಮತ್ತು ರಾಜ್ಯದ ಮುಂದಿನ ರಾಜಕೀಯದ ಉತ್ತಮ ಭವಿಷ್ಯಕ್ಕಾಗಿ ಈ ಮೈತ್ರಿ ಅನಿವಾರ್ಯ ಎಂಬುದನ್ನು ಕೂಡ ಹೇಳಿದ್ದಾರೆ. ಹಲವು ವರ್ಷಗಳಿಂದ ಜೆಡಿಎಸ್ ತನ್ನ ಜಾತ್ಯತೀತ ಅರ್ಹತೆ ಕಾಪಾಡಲು ಕೇಸರಿ ಪಕ್ಷದಿಂದ ಅಂತರ ಕಾಯ್ದುಕೊಂಡಿತ್ತು.

ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರ್ಯಾಲಿಯಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ 91 ವರ್ಷದ ಪಕ್ಷದ ವರಿಷ್ಠ, ತಮ್ಮ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರೊಂದಿಗೆ ಸೀಟು ಹಂಚಿಕೆ ಕುರಿತು ಮತ್ತಷ್ಟು ಚರ್ಚಿಸಲಿದ್ದಾರೆ ಎಂದು ಹೇಳಿದರು. 

ಕೆಲವು ದಿನಗಳ ಹಿಂದೆ ನಾನು ಪ್ರಧಾನಿ ಮತ್ತು ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿ ಮತ್ತು ನಮ್ಮ ಪಕ್ಷದ ಬಲಾಬಲವನ್ನು ವಿವರಿಸಿದ್ದು ನಿಜ ಎಂದು ಹೇಳಿದರು.
ವಿಜಯಪುರ, ರಾಯಚೂರು, ಬೀದರ್ ಹಾಗೂ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲೂ ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕಾಗಿದೆ. ಇದೇ ವೇಳೆ ತುಮಕೂರು, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬಿಜೆಪಿ ತನ್ನದೇ ಆದ ಅಸ್ತಿತ್ವ ಹೊಂದಿದೆ ಎಂದು ದೇವೇಗೌಡರು ವ್ಯಾಖ್ಯಾನ ನೀಡಿದರು.

ನಿನ್ನೆ ಸಮಾವೇಶದಲ್ಲಿ ವೀಲ್ ಚೇರ್ ನಲ್ಲಿ ಕುಳಿತು ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಹೇಳಿದ ಗೌಡರು, ರಾಜ್ಯದ ಜನತೆ ಪ್ರಾದೇಶಿಕ ಪಕ್ಷವನ್ನು ಉಳಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. 

ಸಿದ್ದರಾಮಯ್ಯಗೆ ನೈತಿಕ ಹಕ್ಕು ಏನಿದೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತ್ಯತೀತ ಹಕ್ಕುಗಳನ್ನು ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು. ಸಿದ್ದರಾಮಯ್ಯನವರು ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕರ ಬೆಂಬಲ ಪಡೆದ ಕನ್ನಡ ಕಾವಲು ಸಮಿತಿಯ ಸದಸ್ಯರಾಗಿದ್ದರಲ್ಲವೇ, ನನ್ನನ್ನು ಪ್ರಶ್ನಿಸಲು ಅವರು ಸಮರ್ಥರಲ್ಲ. ಕೆಲವರು ಹೊಸ ಮೈತ್ರಿಯ ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ದೆಹಲಿಯಲ್ಲಿ ಯಾರನ್ನು ಭೇಟಿಯಾಗಿದ್ದೇನೆ ಎಂಬುದರ ಬಗ್ಗೆ ಯಾವುದೇ ರಹಸ್ಯವಿಲ್ಲ. ಆದರೆ ನೈತಿಕತೆಯ ಬಗ್ಗೆ ಮಾತನಾಡುವ ರಾಜ್ಯದ ಯಾವ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ನಾನು ವಿಶ್ಲೇಷಿಸಬಲ್ಲೆ ಎಂದು ಗುಡುಗಿದರು.

2018ರಲ್ಲಿ ರಾಜೀನಾಮೆ ನೀಡಲು ಮೋದಿ ಮನವಿ: ನಾನು ಯಾರನ್ನೂ ವೈಯಕ್ತಿಕ ನಿಂದನೆ ಮಾಡಲು ಹೋಗುವುದಿಲ್ಲ. ಮನಸ್ಸು ಮಾಡಿದರೆ ನಾನು ಈ 91ರ ಹರೆಯದಲ್ಲಿಯೂ ಸಾಧಿಸಬಲ್ಲೆ ಎಂದು ಸಮರ್ಥಿಸಿಕೊಂಡರು. 2006ರಲ್ಲಿ ಬಿಜೆಪಿಯೊಂದಿಗೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳುವುದಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದು ನಿಜ.ಅಂದು ಪಕ್ಷದ ಉಳಿವಿಗೆ ಅದು ಅನಿವಾರ್ಯವಾಗಿತ್ತು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಪ್ರಧಾನಿ ಮೋದಿ ಕುಮಾರಸ್ವಾಮಿಗೆ ಕೇಳಿಕೊಂಡಿದ್ದರು ಎಂದು ಕೂಡ ದೇವೇಗೌಡರು ಹೇಳಿದರು.

ಬಿಹಾರದಲ್ಲಿ ನಿತೀಶ್ ಕುಮಾರ್ (ಜೆಡಿಯು) ಮುಖ್ಯಮಂತ್ರಿ ಆದಂತೆ ಕುಮಾರಸ್ವಾಮಿಯನ್ನು ದೀರ್ಘಾವಧಿಗೆ ಮುಖ್ಯಮಂತ್ರಿ ಮಾಡುವುದಾಗಿ ಮೋದಿ ಹೇಳಿದ್ದರು. ಕುಮಾರಸ್ವಾಮಿ ಪ್ರಧಾನಿ ಭೇಟಿ ವೇಳೆ ಹೆಚ್ ಡಿ ರೇವಣ್ಣ ಕೂಡ ಇದ್ದರು. ಆದರೆ, ನನ್ನಿಂದಾಗಿ ಕುಮಾರಸ್ವಾಮಿ ಅವರು ಮೋದಿಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರು ಎಂದು ದೇವೇಗೌಡರು ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಹಣ ನೀಡಲು ಸರ್ಕಾರ ರಾಜ್ಯದ ಜನತೆಯ ಹಣವನ್ನು ಲೂಟಿ ಮಾಡುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬಿಲ್ಡರ್‌ಗಳಿಂದ 2,000 ಕೋಟಿ ರೂಪಾಯಿ ಬರಬೇಕೆಂದು ಟಾರ್ಗೆಟ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಲಿದೆ ಎಂದರು.

ಕಾಂಗ್ರೆಸ್ ಈಗಾಗಲೇ 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ನಾವು, ಆ ಪಕ್ಷದ ನಾಯಕರ ಅಹಂಕಾರವನ್ನು ಮುರಿಯುತ್ತೇವೆ ಎಂದರು. 2006ರಲ್ಲಿ ದೇವೇಗೌಡರ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದೆ. ಇಂದು ಅವರ ಒಪ್ಪಿಗೆ ಮೇರೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇನೆ. 2006ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರವಾಗದಿರಲು ಕಾಂಗ್ರೆಸ್‌ ಷಡ್ಯಂತ್ರವೇ ಕಾರಣ. ಬಿಜೆಪಿಯೊಳಗಿನ ಕೆಲವು ನಾಯಕರಿಗೂ ಸರ್ಕಾರ ಬೇಕಾಗಿರಲಿಲ್ಲ ಎಂದು ಸಹ ಸ್ಫೋಟಕ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com