ಬಗೆಹರಿಯದ ದಳಪತಿಗಳ ಕುಟುಂಬ ಕಲಹ: ದೇವೇಗೌಡರ ಮನೆಯಲ್ಲಿ ಸಂಧಾನಸಭೆ; ಅಸಮಾಧಾನದಿಂದ ಅರ್ಧಕ್ಕೆ ಹೊರ ನಡೆದ ಭವಾನಿ ರೇವಣ್ಣ?

ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವುದು ಸಾಧ್ಯವಿಲ್ಲ ಎಂಬ ಮಾತನ್ನು ದೇವೇಗೌಡ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.
ಎಚ್.ಡಿ ದೇವೇಗೌಡ ಮತ್ತು ಭವಾನಿ ರೇವಣ್ಣ
ಎಚ್.ಡಿ ದೇವೇಗೌಡ ಮತ್ತು ಭವಾನಿ ರೇವಣ್ಣ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವುದು ಸಾಧ್ಯವಿಲ್ಲ ಎಂಬ ಮಾತನ್ನು ದೇವೇಗೌಡ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ ಮತ್ತು ಎಚ್‌.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ.

ಹಾಸನ‌ ವಿಧಾನಸಭೆ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಸಂಬಂಧ ಭಾನುವಾರ ತಡರಾತ್ರಿ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಆದರೆ ಗೊಂದಲ ನಿವಾರಣೆ ಸಾಧ್ಯವಾಗಿಲ್ಲ.  ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಆರಂಭವಾದ 15 ನಿಮಿಷದಲ್ಲೇ ಭವಾನಿ ರೇವಣ್ಣ ನಿರ್ಗಮಿಸಿದರು. ಅಸಮಾಧಾನ ವ್ಯಕ್ತಪಡಿಸಿ ಭವಾನಿ ಹೊರ ನಡೆದರು ಎಂಬ ಅನುಮಾನ ಮೂಡಿದೆ. ಇದಾದ ಕೆಲವೇ ಹೊತ್ತಿನಲ್ಲೇ ಹೆಚ್.ಡಿ.ರೇವಣ್ಣ ಕೂಡ ಸಭೆಯಿಂದ ಹೋಗಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಇಬ್ಬರೂ ನಿರಾಕರಿಸಿದ್ದಾರೆ. ಮೇಲ್ನೋಟಕ್ಕೆ ಹಾಸನ‌ ಟಿಕೆಟ್ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂದು ಹೇಳಲಾಗುತ್ತಿದೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್​​ಗಾಗಿ ಪಟ್ಟು ಹಿಡಿದಿದ್ದಾರೆ. ಹೆಚ್.ಡಿ.ರೇವಣ್ಣ ಕೂಡ ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವರೂಪ್ ಅವರನ್ನು ಕಣಕ್ಕಿಳಿಸಲು ಒಲವು ತೋರಿದ್ದಾರೆ. ಈ ನಿಟ್ಟಿನಲ್ಲಿ ಸಹೋದರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆ ಜಟಾಪಟಿಯೂ ನಡೆದಿತ್ತು. ಟಿಕೆಟ್ ಬಿಕ್ಕಟ್ಟು ಬಗೆಹರಿಯದ ಕಾರಣ ದೊಡ್ಡಗೌಡರು ಮಧ್ಯಪ್ರವೇಶ ಮಾಡಿದ್ದಾರೆ.

ದೇವೇಗೌಡರ ಮನೆಗೆ ಭವಾನಿ ರೇವಣ್ಣ, ಪತಿ ಹೆಚ್‌.ಡಿ ರೇವಣ್ಣ ಕಾರಿನಲ್ಲಿ ಜೊತೆಗೆ ಆಗಮಿಸಿದ್ದರು. ಆದರೆ ಸಭೆಯ ಮಧ್ಯೆ ದೇವೇಗೌಡರ ಮನೆಯಿಂದ ಹೊರ ಬಂದ ಭವಾನಿ ರೇವಣ್ಣ ಬೇರೊಂದು ಕಾರಿನಲ್ಲಿ ತೆರಳಿದರು. ಕಾರನ್ನು ನಿವಾಸದ ಪಾರ್ಕಿಂಗ್‌ಗೆ ಕರೆಸಿಕೊಂಡು, ತಮ್ಮ ಖಾಸಗಿ ಕಾರಿನಲ್ಲಿ ಪದ್ಮನಾಭನಗರ ನಿವಾಸದಿಂದ ಭವಾನಿ ರೇವಣ್ಣ ಹೊರಟರು. ಭವಾನಿ ರೇವಣ್ಣ ದೇವೇಗೌಡರ ಮನೆಯಿಂದ ಹೊರ ಬಂದ ಮೇಲೆ ಹೆಚ್.ಡಿ.ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಅಭ್ಯರ್ಥಿಯನ್ನೂ ಸೇರಿಸಿ ಟಿಕೆಟ್ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಸನ‌ ಟಿಕೆಟ್ ಸಂಬಂಧ ಒಮ್ಮತ ಮೂಡಿಲ್ಲ ಎನ್ನಲಾಗಿದೆ.  ಆದರೆ 2ನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಅಭ್ಯರ್ಥಿ ಹೆಸರು ತಡೆ ಹಿಡಿಯಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com