ಡಿಕೆಶಿ ಭದ್ರಕೋಟೆಗೆ ಆರ್.ಅಶೋಕ್ ಎಂಟ್ರಿ: ಕನಕಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಕಂದಾಯ ಸಚಿವ ಆರ್ ಅಶೋಕ ಅವರು, ಕನಕಪುರ ವಿಧಾನಸಭಾ ಕ್ಷೇತ್ರದಿಂದ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಕಂದಾಯ ಸಚಿವ ಆರ್ ಅಶೋಕ ಅವರು, ಕನಕಪುರ ವಿಧಾನಸಭಾ ಕ್ಷೇತ್ರದಿಂದ ಮಂಗಳವಾರ ನಾಮಪತ್ರ ಸಲ್ಲಿಸಿದರು.

ತಮ್ಮ ಜನಪ್ರಿಯತೆ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ, ರಾಜ್ಯಾದ್ಯಂತ ಪ್ರಸ್ತುತತೆ ಇರುವ ಒಕ್ಕಲಿಗ ನಾಯಕ ಕೂಡ ಹೌದು ಎಂಬುದನ್ನು ಸಾಬೀತುಪಡಿಸುವ ಅವಕಾಶ ಅಶೋಕ್ ಅವರಿಗೆ ಒದಗಿ ಬಂದಿದೆ.

ಇದರಂತೆ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆಯಾದ ಕನಕಪುರಕ್ಕೆ ಎಂಟ್ರಿ ಕೊಟ್ಟಿರುವ ಅಶೋಕ್ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ನಿನ್ನೆ ಬೃಹತ್ ಸಮಾವೇಶ ನಡೆಸಿದರು.

ಈ ವೇಳೆ ಅಶೋಕ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತಿತರರು ಇದ್ದರು.

ಇದೇ ವೇಳೆ ಚನ್ನಪಟ್ಟಣದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೀಶ್ವರ್ ಅವರೂ ನಾಮಪತ್ರ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರಗೇಶ್ ನಿರಾಣಿ ಅವರೊಂದಿಗೆ ಕ್ರಮವಾಗಿ ಮುಧೋಳ ಮತ್ತು ಬಿಳಗಿ ಕ್ಷೇತ್ರದಿಂದ ನಾಮಪತ್ರಗಳನ್ನು ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜೊತೆಗಿದ್ದರು.

ಎರಡೂ ಕಡೆ ನಡೆದ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು, ಉತ್ತರ ಕರ್ನಾಟಕದ ಜನತೆಗೆ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಇನ್ನೂ ಹಲವು ಸಚಿವರು ನಾಮಪತ್ರ ಸಲ್ಲಿಸಿದರು. ಬಳ್ಳಾರಿಯಿಂದ ಸಚಿವ ಬಿ.ಶ್ರೀರಾಮುಲು, ಬೈರತಿ ಬಸವರಾಜು ಬೆಂಗಳೂರಿನ ಕೆಆರ್ ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯಲ್ಲಿ ನಾಮಪತ್ರ ಸಲ್ಲಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತೀರ್ಥಹಳ್ಳಿ ಮತ್ತು ಯಲ್ಲಾಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಬಿ.ಸಿ.ಪಾಟೀಲ್ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಯಾವುದಾದರೂ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡರೆ ಎಂಬ ಕಾರಣಕ್ಕೆ ಇದೇ ವೇಳೆ ಸೃಷ್ಟಿ ಪಾಟೀಲ್ ಕೂಡ ನಾಮಪತ್ರ ಸಲ್ಲಿಸಿದರು.

ಇದೇ ವೇಳೆ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಟ್ಟಿದ ಮಾಜಿ ಸಚಿವ, ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರು, ಗಂಗಾವತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್ ಶಂಕರ್ ಅವರು, ರಾಣೆಬೆನ್ನೂರು ಕ್ಷೇತ್ರಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ರಾಜ್ಯದ ಹಿರಿಯ ಶಾಸಕರಲ್ಲಿ ಒಬ್ಬರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಿಂದ 10ನೇ ಬಾರಿಗೆ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆಗೊಂಡ ವೈಎಸ್‌ವಿ ದತ್ತ ಅವರು, ಕಡೂರಿನಿಂದ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಾಜರಿದ್ದರು. ಇನ್ನು ಮಹದೇವಪುರ ಕ್ಷೇತ್ರದಿಂದ ಬಿಜೆಪಿಯ ಹಾಲಿ ಶಾಸಕ ಅರವಿಂದ ಲಿಂಬಾವಳಿ ಅವರ ಪತ್ನಿ ಮಂಜುಳಾ ಎಸ್‌ ಅವರು ನಾಮಪತ್ರ ಸಲ್ಲಿಸಿದರು.

ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪಕ್ಷ ತೊರೆಯುವ ಪ್ರವೃತ್ತಿಯನ್ನು ಹುಟ್ಟುಹಾಕಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು, ಬೆಳಗಾವಿಯ ಅಥಣಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಹುಬ್ಬಳ್ಳಿ-ಧಾರವಾಡ-ಸೆಂಟ್ರಲ್ ಕ್ಷೇತ್ರದಿಂದ ಮಹೇಶ್ ತೆಂಗಿನಕಾಯಿ ಅವರು ನಾಮಪತ್ರ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com