ಹುಬ್ಬಳ್ಳಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆದು ಒಂದು ವಾರದೊಳಗೆ ಕಾಂಗ್ರೆಸ್ ಸೇರಿದ ಲಿಂಗಾಯತ ಸಮುದಾಯದ ಎರಡನೇ ಹಿರಿಯ ನಾಯಕ. ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರಿದ್ದರು.
ಶೆಟ್ಟರ್ ಅವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಎದುರಿಸಲಿದ್ದಾರೆ.
ಮೇ 10 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದ ಒಂದು ದಿನದ ನಂತರ ಶೆಟ್ಟರ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶೆಟ್ಟರ್ ಅವರನ್ನು ಪಕ್ಷಕ್ಕೆ ಭರಮಾಡಿಕೊಳ್ಳಲಾಯಿತು.
ಶೆಟ್ಟರ್ ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕ ಅಮರ್ ಸಿಂಗ್ ಪಾಟೀಲ್ ಕೂಡ ಕಾಂಗ್ರೆಸ್ ಸೇರಿದರು.
ಈ ವೇಳೆ ಮಾತನಾಡಿದ್ದ ಶೆಟ್ಟರ್, 'ನಿನ್ನೆ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರು ಕಾಂಗ್ರೆಸ್‌ಗೆ ಸೇರುತ್ತಿರುವುದು ಹಲವರಿಗೆ ಅಚ್ಚರಿ ತಂದಿದೆ. ಬಿಜೆಪಿ ನನಗೆ ಎಲ್ಲ ಸ್ಥಾನಮಾನ ನೀಡಿದೆ ಮತ್ತು ಪಕ್ಷದ ಕಾರ್ಯಕರ್ತನಾಗಿದ್ದ ನಾನು ಪಕ್ಷದ ಬೆಳವಣಿಗೆಗೆ ಸದಾ ದುಡಿದಿದ್ದೇನೆ' ಎಂದು ಹೇಳಿದರು.
'(ಬಿಜೆಪಿ) ಪಕ್ಷದ ಬೆಳವಣಿಗೆಗೆ ಸಂಘಟಿತರಾಗಿ ಶ್ರಮಿಸಿದವರಲ್ಲಿ ನಾನೂ ಇದ್ದೆ. ಹೌದು ಬಿಜೆಪಿ ನನಗೆ ಗೌರವ ಮತ್ತು ಸ್ಥಾನ ನೀಡಿತು. ನಾನು ಆರು ಬಾರಿ ಶಾಸಕನಾಗಿ ಗೆದ್ದಿದ್ದೇನೆ ಮತ್ತು ನಾನು ಸ್ವಾಭಾವಿಕವಾಗಿ ಏಳನೇ ಬಾರಿಗೆ ಸ್ಪರ್ಧಿಸುತ್ತೇನೆ ಎಂದು ಭಾವಿಸಿದ್ದೆ' ಎಂದು ಅವರು ಹೇಳಿದರು.
ಹಿರಿಯ ನಾಯಕನಾಗಿದ್ದ ನನಗೆ ಟಿಕೆಟ್ ಸಿಗುತ್ತದೆ ಎಂದೇ ಭಾವಿಸಿದ್ದೆ. ಆದರೆ, ಸಿಗುತ್ತಿಲ್ಲ ಎಂದು ತಿಳಿದಾಗ ಬೆಚ್ಚಿಬಿದ್ದಿದ್ದೇನೆ. ಯಾರೂ ನನ್ನ ಬಳಿ ಮಾತನಾಡಿಲ್ಲ, ಮನವೊಲಿಸುವ ಪ್ರಯತ್ನ ಮಾಡಿಲ್ಲ, ನನಗೆ ಯಾವ ಸ್ಥಾನ ಸಿಗಲಿದೆ ಎಂಬ ಭರವಸೆಯನ್ನೂ ನೀಡಿಲ್ಲ' ಎಂದು ಅವರು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
Advertisement