ಆಸ್ಪತ್ರೆಯಿಂದಲೇ ಎಚ್‌ಡಿಕೆ ರಣತಂತ್ರ; ಮುಸ್ಲಿಂ ಸಮಾಜವನ್ನು ಬಿಟ್ಟುಕೊಡಲ್ಲ: ಶಿರಾ ಚುನಾವಣಾ ಪ್ರಚಾರದಲ್ಲಿ ಎಚ್‌ಡಿಡಿ

ಕುಮಾರಸ್ವಾಮಿ ಆಸ್ಪತ್ರೆ ಸೇರಿದ್ದು, ಪುತ್ರನ ಅನುಪಸ್ಥಿತಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ವೈದ್ಯರ ಸಲಹೆಗೆ ವಿರುದ್ಧವಾಗಿ ತಮ್ಮ 92ನೇ ವಯಸ್ಸಿನಲ್ಲಿಯೂ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಸ್ಪತ್ರೆ ಸೇರಿದ್ದು, ಪುತ್ರನ ಅನುಪಸ್ಥಿತಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ವೈದ್ಯರ ಸಲಹೆಗೆ ವಿರುದ್ಧವಾಗಿ ತಮ್ಮ 92ನೇ ವಯಸ್ಸಿನಲ್ಲಿಯೂ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ನಿರ್ಣಾಯಕ ಘಟ್ಟದಲ್ಲಿ ಪುತ್ರನ ಅನುಪಸ್ಥಿತಿಯನ್ನು ಸರಿದೂಗಿಸಲು, ದೈಹಿಕವಾಗಿ ಅಸಮರ್ಥರಾಗಿದ್ದರೂ ಸಹ ದೇವೇಗೌಡರು ಚುನಾವಣಾ ಪ್ರಚಾರ ಕಣಕ್ಕಿಳಿದಿದ್ದಾರೆ.

ತುಮಕೂರಿನ ಶಿರಾದಲ್ಲಿ ಮಾತನಾಡಿದ ಎಚ್‌ಡಿ ದೇವೇಗೌಡ ಅವರು, ಕುಮಾರಸ್ವಾಮಿ ಹೇಳಿದ ಕಡೆ ಪ್ರಚಾರ ಮಾಡುತ್ತೇನೆ. ಇಲ್ಲಿ ಕೆಲವು ಅಭಿಮಾನಿಗಳು ನನ್ನ ಹೆಗಲ ಮೇಲೆ ಕುರಿ ಹೊರಿಸಿದ್ರು. ನನಗೆ 92 ವರ್ಷ ವಯಸ್ಸಾದ್ರೂ ನಿಮ್ಮ ಮುಂದೆ ಅದನ್ನು ಪ್ರದರ್ಶಿಸಿದ್ದೇನೆ. ಕುಮಾರಸ್ವಾಮಿ ಆಸ್ಪತ್ರೆಯಲ್ಲಿದ್ದಾರೆ, ಅದೆಲ್ಲ ದೇವರ ಇಚ್ಚೆ. ಕುಮಾರಸ್ವಾಮಿ ಮತ್ತೆ ಪ್ರಚಾರ ಮಾಡ್ತಾರೆ ಎಂದರು.

ಪಂಚರತ್ನ ಯೋಜನೆ ಜಾರಿ ಮಾಡಲು ಹೋರಾಟ ಮಾಡುತ್ತಿದ್ದೇವೆ. ಮುಸ್ಲಿಂ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಎಂದಿಗೂ ಮುಸ್ಲಿಂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ, ಮುಂದೆಯೂ ಬಿಟ್ಟುಕೊಡೋದು ಇಲ್ಲ. ಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ತಾಯಂದಿರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಚುನಾವಣೆ ಘೋಷಣೆಯಾದಾಗಿನಿಂದಲೂ ತೀವ್ರ ಪ್ರಚಾರ ನಡೆಸುತ್ತಿದ್ದ ಕುಮಾರಸ್ವಾಮಿ ಅವರು ನಿಶ್ಯಕ್ತಿಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರದ ಪ್ರಚಾರದ ವಿರುದ್ಧ ಏಕಾಂಗಿಯಾಗಿ ನಿಂತು ಪ್ರಚಾರದಲ್ಲಿ ತೊಡಗಿದ್ದ ಅವರು, ಇದೀಗ ಆಸ್ಪತ್ರೆಯಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.

ಸೋಮವಾರ ಜೆಡಿಎಸ್‌ನ ಭದ್ರಕೋಟೆ ಎನಿಸಿರುವ 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ನಗರಗಳಲ್ಲಿ ಪ್ರಚಾರಕ್ಕೆ ಎಚ್‌ಡಿ ದೇವೇಗೌಡರು ಮುಂದಾಗಿದ್ದಾರೆ. ಇದಾದ ಬಳಿಕ ಮಂಗಳವಾರ, ಮೈಸೂರು ಜಿಲ್ಲೆಗೆ ಆಗಮಿಸಿ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ ಪಟ್ಟಣಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

ವೈದ್ಯರ ಸಲಹೆಗೆ ವಿರುದ್ಧವಾಗಿ ದೇವೇಗೌಡರು ಪ್ರಚಾರಕ್ಕೆ ಮುಂದಾಗುತ್ತಿದ್ದಂತೆ ವೈದ್ಯಕೀಯ ತಜ್ಞರ ತಂಡವೂ ಅವರನ್ನು ಹಿಂಬಾಲಿಸುತ್ತಿದೆ. ದೇವೇಗೌಡರು ಭಾನುವಾರ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಇತ್ತೀಚೆಗಷ್ಟೇ ನಡೆದ ಜೆಡಿ(ಎಸ್)ನ ಸಾರ್ವಜನಿಕ ರ‍್ಯಾಲಿಗೆ ಗಾಲಿ ಕುರ್ಚಿಯ ಮೇಲೆ ಕರೆತರಲಾಗಿತ್ತು ಮತ್ತು ಅಪಾರ ಜನಸ್ತೋಮ ನೆರೆದಿತ್ತು. ಕೊನೆಯ ಬಾರಿಗೆ ಜೆಡಿಎಸ್ ಅಧಿಕಾರದಲ್ಲಿರಬೇಕೆಂಬ ಅವರ ಮನವಿಗೆ ಒಕ್ಕಲಿಗರೇ ಅಧಿಕವಾಗಿರುವ ಅಲ್ಲಿ ಭಾರಿ ಜನಸ್ಪಂದನೆ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com